ಪಾಕ್ ಪರ ಘೋಷಣೆ; ಎಫ್ಎಸ್ ಎಲ್ ವರದಿಯಲ್ಲಿ ದೃಢ: ಮೂವರನ್ನು ಬಂಧಿಸಲಾಗಿದೆ ಎಂದ ಗೃಹ ಸಚಿವ
ಬೆಂಗಳೂರು: ವಿಧಾನಸೌಧ ಆವರಣದಲ್ಲಿ ರಾಜ್ಯಸಭೆ ಚುನಾವಣೆ ಮುಗಿದು ಡಾ.ನಾಸಿರ್ ಹುಸೇನ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಎಫ್ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದ್ದು, ಈ ಪ್ರಕರಣ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಎಫ್ ಎಸ್ ಎಲ್ ವರದಿ ಬರಲಿ ಎಂದು ಹೇಳುತ್ತಿದ್ದೆವು. ಎಫ್ ಎಸ್ ಎಲ್ ವರದಿ ಆಧರಿಸಿ ಕ್ರಮ ಕೈಗೊಡಿದ್ದೇವೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ದೃಢಪಟ್ಟಿದೆ. ಹೀಗಾಗಿ ಎಫ್ ಎಸ್ ಎಲ್ ವರದಿ ಆಧರಿಸಿ ಮೂವರನ್ನ ಬಂಧಿಸಲಾಗಿದೆ. ವರದಿಯಲ್ಲಿ ಯಾರು ಘೋಷಣೆ ಕೂಗಿದ್ದಾರೆಂದು ಹೇಳಿಲ್ಲ. ಯಾಕೆ ಕೂಗಿದ್ದಾರೆಂದು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳ ಲೋಪ ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿರೋಧ ಪಕ್ಷದವರು ಸುಮ್ಮನೆ ಹೇಳುತ್ತಾರೆ. ಅವರು ಹೇಳ್ತಾರೆ ಎಂದು ಅರೆಸ್ಟ್ ಮಾಡೋಕೆ ಆಗುತ್ತಾ? ನಾವು ಎಫ್ ಎಸ್ ಎಲ್ ವರದಿ ಬರಲಿ ಅಂತಾ ಕಾಯುತ್ತಿದ್ದವು. ಈಗ ಬಂದಿದೆ. ಕ್ರಮ ಕೈಗೊಂಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.