ಪಾಕಿಸ್ತಾನ್ ಜಿಂದಾಬಾದ್ ಘೋಷಣೆ; 2 ವರ್ಷದ ಹಿಂದಿನ ಪ್ರಕರಣಕ್ಕೆ ಜೀವ: ಮಂಡ್ಯ ಬಿಜೆಪಿ ಕಾರ್ಯಕರ್ತನ ಬಂಧನ
ಮಂಡ್ಯ: ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಮೂವರನ್ನು ಬಂಧಿಸಿದ ಬೆನ್ನಿಗೇ ಇತ್ತ ಮಂಡ್ಯದಲ್ಲಿ 2 ವರ್ಷದ ಹಿಂದಿನ ಪ್ರಕರಣಕ್ಕೆ ಜೀವ ಬಂದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ .
ಎರಡು ವರ್ಷದ ಹಿಂದೆ ಮಂಡ್ಯದ ಸಂಜಯ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಮಂಡ್ಯ ತಾಲೂಕಿನ ಡನಾಯಕನಪುರ ರವಿ ಎಂಬಾತ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಬೆಂಗಳೂರಿನ ಪ್ರಕರಣ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಂಡ್ಯದ ಘಟನೆಯೂ ಮೇಲೆದ್ದು ಬಂದಿತ್ತು. ರವಿ ಅಚಾತುರ್ಯದಿಂದ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗಿ ಹೇಳಿದ್ದರೂ ಏನು ಮಾಡಿದರೂ ಅದು ತಪ್ಪೇ ಎಂದು ಇನ್ನೊಂದು ವಾದ ಕೇಳಿಬಂದಿತ್ತು.
2022ರ ಡಿಸೆಂಬರ್ 18ರಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೇಳಿಬಂದಿತ್ತು. ರವಿ ಎಂಬಾತ ಪಾಕಿಸ್ತಾನ್ ಮುರ್ದಾಬಾದ್ ಎಂದು ಹೇಳುವ ಬದಲು ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ.
ಮಂಡ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೋಮವಾರ ರಾತ್ರಿ ಕನ್ನಂಬಾಡಿ ಕುಮಾರ್ ಎಂಬವರು ದೂರು ದಾಖಲಿಸಿದರು. ಇದರ ಆಧಾರದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದರು. ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಉಪ್ಪರಕನಹಳ್ಳಿ ಆರಾಧ್ಯ, ಡಣಾಕನಪುರ ರವಿ ಮತ್ತು ಇತರರ ವಿರುದ್ಧ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದು ಬಳಿಕ ರಾತ್ರಿಯೇ ರವಿಯನ್ನು ಬಂಧಿಸಿದ್ದಾರೆ.