ಕೇರಳದಲ್ಲಿ ಸಿಎಎ ಜಾರಿ ಮಾಡಲ್ಲ; ಕೇಂದ್ರಕ್ಕೆ ಸೆಡ್ಡುಹೊಡೆದ ಪಿಣರಾಯಿ ವಿಜಯನ್ ಮಮತಾ ಬ್ಯಾನರ್ಜಿ ಹೇಳಿದ್ದು ಏನು ಗೊತ್ತೇ...?
ತಿರುವನಂತಪುರ : ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ದೇಶಾದ್ಯಂತ ಜಾರಿ ಮಾಡಲು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ನಮ್ಮ ರಾಜ್ಯದಲ್ಲಿ ಈ ಕಾಯ್ದೆ (ಸಿಎಎ) ಜಾರಿ ಮಾಡಲ್ಲ ಎಂದಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಜಾರಿಯಾಗದ ಬಾಕಿ ಉಳಿದಿದ್ದ ಸಿಎಎಯನ್ನು ಚುನಾವಣೆ ಮುಂಚೆ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅಂತೆಯೇ ಸೋಮವಾರ ಸಂಜೆ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಬಗ್ಗೆ ಕೇರಳ ಸಿಎಂ ವಿಜಯನ್ ಪ್ರತಿಕ್ರಿಯೆ ನೀಡಿ, " ಸಿಎಎ ಎಂಬುವುದು ಕೋಮು ವಿಭಜಕ ಕಾನೂನು ಆಗಿದೆ. ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ನಮ್ಮ ಕೇರಳ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ " ಎಂದು ಪ್ರತಿಪಾದಿಸಿದ್ದಾರೆ.
ಕಾಯ್ದೆ ಜಾರಿಯಾದ ಬೆನ್ನಲ್ಲೆ ದೇಶದ ಪ್ರಮುಖ ನಗರಗಳಾದ ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ ಎಂದು ಕೆಲ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ಮಮತಾ ಬ್ಯಾನರ್ಜಿ ಹೇಳಿದ್ದು ಹೀಗೆ...
ಸಿಎಎ ಜಾರಿ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದು, " ಇದು ಬಿಜೆಪಿಯ ಚುನಾವಣೆ ಪ್ರಚಾರ, ಬೇರೇನೂ ಅಲ್ಲ ಮೊದಲು ಸಿಎಎ ನಿಯಮಗಳನ್ನು ನೋಡೋಣ. ಆ ನಿಯಮಗಳು ಜನರ ಹಕ್ಕುಗಳನ್ನು ಕಸಿದುಕೊಂಡರೆ, ನಾವು ಅದರ ವಿರುದ್ಧ ಹೋರಾಡುತ್ತೇವೆ " ಎಂದಿದ್ದಾರೆ.