ಕೈ ತಪ್ಪಿದ ಬಿಜೆಪಿ ಟಿಕೆಟ್; ಮೋದಿ ಬಗ್ಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದೇನು...?
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನಿರಾಕರಿಸಿರುವ ಕುರಿತು ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದು, ‘ನಾನು ನಾಥೂರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಹೊಗಳಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ನನ್ನ ಹೇಳಿಕೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ನನ್ನನ್ನು ಕ್ಷಮಿಸುವುದಿಲ್ಲ ಎಂದೂ ಅವರು ಹೇಳಿದ್ದರು’ ಎಂದು ಠಾಕೂರ್ ತಿಳಿಸಿದ್ದಾರೆ.
‘ನಾನು ಈ ಹಿಂದೆಯೂ ಟಿಕೆಟ್ ಬಯಸಿರಲಿಲ್ಲ. ಈಗಲೂ ಟಿಕೆಟ್ ಬಯಸುತ್ತಿಲ್ಲ. ನಾನು ನೀಡಿದ್ದ ಕೆಲವು ಹೇಳಿಕೆಗಳಿಂದ ಪ್ರಧಾನಿ ಮೋದಿ ಅವರ ಮನಸ್ಸಿಗೆ ನೋವುಂಟು ಮಾಡಿರಬಹುದು. ಹಾಗಾಗಿ ಅವರು ನನ್ನನ್ನು ಕ್ಷಮಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ನಾನು ಈಗಾಗಲೇ ಅವರ ಬಳಿ ಕ್ಷಮೆಯಾಚಿಸಿದ್ದೇನೆ’ ಎಂದು ಠಾಕೂರ್ ‘ಇಂಡಿಯಾ ಟುಡೇ’ಗೆ ತಿಳಿಸಿದ್ದಾರೆ.
ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ‘ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ನಾಥೂರಾಮ್ ಗೋಡ್ಸೆ ಒಬ್ಬ ನಿಜವಾದ ದೇಶಭಕ್ತ’ ಎಂದು 2019ರಲ್ಲಿ ಹೇಳಿಕೆ ನೀಡಿದ್ದರು. ಠಾಕೂರ್ ಹೇಳಿಕೆ ಸಂಬಂಧ ಲೋಕಸಭೆಯಲ್ಲಿ ಕೋಲಾಹಲಕ್ಕೂ ಕಾರಣವಾಗಿತ್ತು.
ಸಾಧ್ವಿ ಪ್ರಜ್ಞಾ ಹೇಳಿಕೆ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿ, ‘ಮಹಾತ್ಮ ಗಾಂಧಿಯನ್ನು ಅವಮಾನಿಸಿದ್ದಕ್ಕಾಗಿ ನಾನು ಆಕೆಯನ್ನು (ಸಾಧ್ವಿ) ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಹೇಳಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಆದರೆ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ 33 ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ. ಈ ಪೈಕಿ ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಒಬ್ಬರು.
ಪ್ರಜ್ಞಾ ಸಿಂಗ್ ಠಾಕೂರ್ ಅವರು ಭೋಪಾಲ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ. ಈ ಬಾರಿ ಅವರ ಬದಲಿಗೆ ಅಲೋಕ್ ಶರ್ಮಾಗೆ ಟಿಕೆಟ್ ನೀಡಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಮಧ್ಯಪ್ರದೇಶದಲ್ಲಿ 29 ಸ್ಥಾನಗಳ ಪೈಕಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆರು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇವರಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಸೇರಿದ್ದಾರೆ. ಇಲ್ಲಿ 13 ಜನ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ.