
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ: ಮೂರು ಮಂದಿ ಆರೋಪಿಗಳ ಬಂಧನ
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎಫ್‌ಎಸ್‌ಎಲ್ ವರದಿ, ಸ್ಥಳದ ಸಾಕ್ಷ್ಯಗಳು ಹಾಗೂ ಸಾಕ್ಷಿ ಹೇಳಿಕೆ ಆಧಾರದ ಮೇಲೆ ಮೂರು ಜನರನ್ನು ಬಂಧನ ಮಾಡಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಮೂಲದ ಇಲ್ತಾಜ್, ಬೆಂಗಳೂರು ಆರ್‌ಟಿ. ನಗರ ಮೂಲದ ಮುನಾವರ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂಬಾತನನ್ನು ಬಂಧಿಸಿದ್ದಾರೆ. ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.