ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ; ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಹಾಸನ ಸಿವಿಲ್ ಕೋರ್ಟ್‌ಗೆ ಎಸ್‌ಐಟಿ 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಶ್ಲೀಲ ವಿಡಿಯೋ ಹಂಚಲು ಆರೋಪಿಗಳು 70 ಪೆನ್‌ಡ್ರೈವ್ ಖರೀದಿಸಿದ್ದರು. ಹಾಸನದಲ್ಲೇ 70 ಪೆನ್‌ಡ್ರೈವ್ ಖರೀದಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ. 

ಪ್ರಕರಣದಲ್ಲಿ 52 ಮಂದಿ ಹೆಸರು ಉಲ್ಲೇಖ ಮಾಡಲಾಗಿತ್ತು. 52 ಮಂದಿಯಲ್ಲಿ 39 ಮಂದಿ ಆರೋಪ ಸಾಬೀತಾಗಿದೆ. ವಕೀಲ ಪೂರ್ಣಚಂದ್ರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಲೋಕಸಭೆ ಚುನಾವಣೆ ವೇಳೆ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಎಸ್‌ಐಟಿ ತನಿಖೆ ವೇಳೆ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ.

70 ಪೆನ್‌ಡ್ರೈವ್ ಖರೀದಿಸಿ ವಿಡಿಯೋ ವೈರಲ್ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಸಂಬಂಧ 277 ಸಾಕ್ಷಿಗಳ ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ತಾಂತ್ರಿಕ ವರದಿ, ಎಫ್‌ಎಸ್‌ಎಲ್ ಸಾಕ್ಷಿಗಳ ವರದಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಪ್ರಕರಣದಲ್ಲಿ ಎರಡು ಪಕ್ಷದ ಕಾರ್ಯಕರ್ತರ ವಿರುದ್ಧ ಆರೋಪ ಕೇಳಿಬಂದಿದೆ. ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಕೈಬಿಡಲಾಗಿದೆ. ತನಿಖೆ ಪೂರ್ಣಗೊಳಿಸಿ ಹಾಸನ ಕೋರ್ಟ್‌ಗೆ ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದೆ.