ಮೋದಿ ಅವರೇ ದಯವಿಟ್ಟು ಉತ್ತರಿಸಿ....! ಕಲಬುರಗಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ...

ಮೋದಿ ಅವರೇ ದಯವಿಟ್ಟು ಉತ್ತರಿಸಿ....! ಕಲಬುರಗಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ...

ಬೆಂಗಳೂರು: ಇಂದು ಕಲಬುರಗಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದು, ಉತ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

‘ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಜಗತ್ತಿನ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವಾಗಿ ಹೊರಹೊಮ್ಮುತ್ತಿರುವ ಚುನಾವಣಾ ಬಾಂಡ್ ಸುಲಿಗೆ ಬಗ್ಗೆ ಬಿಜೆಪಿ ಯಾಕೆ ಮೌನವಾಗಿದೆ? ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತಂದು ಜನರಿಗೆ ಹಂಚುತ್ತೇವೆ. ನೋಟ್ ಬ್ಯಾನ್ ಮಾಡಿ ಕಪ್ಪುಹಣದ ಮೂಲೋತ್ಪಾಟನೆ ಮಾಡುತ್ತೇವೆ, ನಾ ಖಾವೂಂಗಾ - ನಾ ಖಾನೆ ದೂಂಗಾ, ದೇಶದ ಸಂಪತ್ತಿಗೆಲ್ಲ ನಾನೇ ಚೌಕಿದಾರ ಎಂದೆಲ್ಲ ಹೇಳಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿಯವರೇ ಕನಿಷ್ಠ ಚುನಾವಣಾ ಬಾಂಡ್ ಹಗರಣದ ಬಗ್ಗೆಯಾದರೂ ಉತ್ತರಿಸಿ’ ಎಂದು ಆಗ್ರಹಿಸಿದ್ದಾರೆ.

‘ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಭಾರತೀಯ ಸ್ಟೇಟ್ ಬ್ಯಾಂಕ್ ಸಂಪೂರ್ಣ ಮಾಹಿತಿ ನೀಡಲು ಯಾಕೆ ಹಿಂಜರಿಯುತ್ತಿದೆ? ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ಖರೀದಿ ವ್ಯವಹಾರ ಕಾನೂನುಬದ್ಧವಾಗಿ ನಡೆದಿದ್ದರೆ ಎಸ್‌ಬಿಐ ಯಾಕೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸುತ್ತಿದೆ? ಎಸ್‌ಬಿಐ ಮೇಲೆ ಒತ್ತಡ ಹೇರುತ್ತಿರುವವರು ಯಾರು? ಪ್ರಧಾನಿ ಮೋದಿ ಅವರೇ ದಯವಿಟ್ಟು ಉತ್ತರಿಸಿ’ ಎಂದು ಒತ್ತಾಯಿಸಿದ್ದಾರೆ.

‘ಮಾಧ್ಯಮಗಳು ವಿಶ್ಲೇಷಿಸುತ್ತಿರುವ ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯನ್ನು ನೋಡಿದರೆ ಕೇಂದ್ರ ಬಿಜೆಪಿ ಸರ್ಕಾರ ಉದ್ಯಮಿಗಳ ಬ್ಲಾಕ್‌ಮೇಲ್ ಮಾಡುತ್ತಿರುವಂತೆ ಕಾಣುತ್ತಿದೆ. ಉದ್ಯಮಿಗಳ ಮೇಲೆ ನಡೆದಿರುವ ಐಟಿ, ಇಡಿ, ಸಿಬಿಐ ದಾಳಿಗಳ ದಿನಾಂಕ ಮತ್ತು ಆ ಉದ್ಯಮಿಗಳು ಚುನಾವಣಾ ಬಾಂಡ್‌ಗಳ ಖರೀದಿ ದಿನಾಂಕಗಳನ್ನು ನೋಡಿದರೆ ಇದೊಂದು ಪಕ್ಕಾ ಬ್ಲಾಕ್‌ಮೇಲ್ ಹಗರಣದಂತೆ ಕಾಣುತ್ತಿದೆ. ದೇಣಿಗೆ ವಸೂಲಿಗಾಗಿ ಕೇಂದ್ರ ಸರ್ಕಾರ ತನ್ನ ಅಧೀನದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಯೇ? ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ? ಈ ಕುರಿತು ಮೋದಿ ಅವರೇ ದಯವಿಟ್ಟು ಉತ್ತರಿಸಿ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

‘ಬಯಲಾಗುತ್ತಿರುವ ಮಾಹಿತಿಗಳನ್ನು ನೋಡಿದರೆ ಚುನಾವಣಾ ಬಾಂಡ್ ಹಗರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿರುವವರು ಮೂಲಭೂತ ಸೌಕರ್ಯ ನಿರ್ಮಾಣದ ಎಂಜನಿಯರಿಂಗ್ ಸಂಸ್ಥೆಗಳು ಮತ್ತು ಔಷಧಿ ಉತ್ಪಾದನಾ ಕಂಪನಿಗಳು. ಇಂತಹ ಭ್ರಷ್ಟ, ವಂಚಕ ಸಂಸ್ಥೆಗಳು ನಿರ್ಮಾಣ ಮಾಡಿರುವ ರಸ್ತೆ, ಸೇತುವೆ, ಕಟ್ಟಡಗಳು ಎಷ್ಟು ಸುಭದ್ರ? ಇಂತಹ ಭ್ರಷ್ಟ-ವಂಚಕ ಸಂಸ್ಥೆಗಳು ತಯಾರಿಸಿದ ಔಷಧಿಗಳು ಎಷ್ಟು ಸುರಕ್ಷಿತ? ಇದಕ್ಕೆ ಮೋದಿ ಅವರೇ ಉತ್ತರಿಸಬೇಕಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಸುಪ್ರೀಂ ಕೋರ್ಟ್ ಖುದ್ದಾಗಿ ಮುಂದೆ ನಿಂತು ಬಯಲು ಮಾಡುತ್ತಿರುವ ಚುನಾವಣಾ ಬಾಂಡ್ ಹಗರಣದ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಅನುಮಾನ ಹುಟ್ಟಿಕೊಂಡಿದೆ. ತಮ್ಮ ತೆರಿಗೆ ಹಣದ ದುರುಪಯೋಗ ನಡೆದಿದೆ. ಇದರಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಪಾತ್ರವಿದೆ ಎಂದು ಜನತೆ ನಂಬಿದ್ದಾರೆ. ಈ ಅನುಮಾನವನ್ನು ಹೋಗಲಾಡಿಸಲು ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯನ್ನು ರಚಿಸಿ ಚುನಾವಣಾ ಬಾಂಡ್ ಹಗರಣದ ತನಿಖೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article