ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ ಲೂಟಿ ಬಯಲಾಗಿದೆ: ಮೋದಿ ಸರಕಾರದ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಮುಂಬೈ: ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿಯು ಚುನಾವಣಾ ಬಾಂಡ್ ಯೋಜನೆಯಿಂದಾಗಿ ₹8,000 ಕೋಟಿ ಪಡೆದುಕೊಂಡಿದೆ. ಕಾಂಗ್ರೆಸ್ ಪಡೆದ ಮೊತ್ತದೊಂದಿಗೆ ಹೋಲಿಕೆ ಮಾಡಿದರೆ ಯಾರು ಎಷ್ಟು ಲೂಟಿ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಕಿಡಿಕಾರಿದ್ದಾರೆ.
‘ವಿಕಸಿತ ಭಾರತದ ಕನಸು ತೋರಿಸುವ ಮೂಲಕ ಬಿಜೆಪಿಯು ಲೂಟಿ ಮಾಡಲು ಇನ್ನೂ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿರುವುದಕ್ಕೆ ಬಯಸುತ್ತದೆ. ನೀವು (ಮತದಾರರು) ಈ ದೇಶವನ್ನು ಮತ್ತೆ ಲೂಟಿಕೋರರ ಕೈಗೆ ನೀಡುತ್ತೀರಾ’ ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಂತಹ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಂತೆಯೇ ಕಾರ್ಪೊರೇಟ್ ವಲಯದವರು ಬಿಜೆಪಿಗೆ ದೊಡ್ಡ ಮೊತ್ತದ ದೇಣಿಗೆ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಠಾಕ್ರೆ ಆರೋಪಿಸಿದ್ದಾರೆ.
ಪ್ರಮುಖ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಪಡೆದಿವೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂದು ಅವರು ದೂರಿದ್ದಾರೆ.
‘ನಾನು ಗುಜರಾತ್ ವಿರೋಧಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಬರುವ ಯೋಜನೆಗಳನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದು ಕುಟುಕಿದ್ದಾರೆ.