ಮಾ.23ರಂದು ಉಡುಪಿಯಲ್ಲಿ 'ಮಿಸ್ಟರ್ ಕರಾವಳಿ ಕ್ಲಾಸಿಕ್ 2024' ಮತ್ತು 'ಮಿಸ್ಟರ್ ಬಿಲ್ಲವ 2024' ದೇಹದಾರ್ಢ್ಯ ಸ್ಪರ್ಧೆ
ಉಡುಪಿ: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಸಂಚಾಲನಾ ಸಮಿತಿ ವತಿಯಿಂದ 'ಮಿಸ್ಟರ್ ಕರಾವಳಿ ಕ್ಲಾಸಿಕ್ 2024' ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮತ್ತು 'ಮಿಸ್ಟರ್ ಬಿಲ್ಲವ 2024' ದೇಹದಾರ್ಢ್ಯ ಸ್ಪರ್ಧೆಗಳನ್ನು ಇದೇ ಮಾರ್ಚ್ 23ರಂದು ಉಡುಪಿ ಬನ್ನಂಜೆಯ ನಾರಾಯಣಗುರು ಮಂದಿರದ ಶಿವಗಿರಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಗೋವರ್ಧನ ಎನ್. ಬಂಗೇರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6 ಗಂಟೆಗೆ ಮಿಸ್ಟರ್ ಕರಾವಳಿ 2024' ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ವಿಜೇತರಾದವರು ಏಪ್ರಿಲ್ 6 ಮತ್ತು 7ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 'ಫೆಡರೇಶನ್ ಕಪ್' ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಯಾವುದೇ ದೇಹದಾರ್ಢ್ಯ ಪಟುಗಳಿಗೆ ಭಾಗವಹಿಸಲು ಅವಕಾಶವಿದ್ದು, ದೇಹ ತೂಕದ 55, 60, 65, 70, 75, 80, 85 ಮತ್ತು 85 ಕೆಜಿ ಮೇಲ್ಪಟ್ಟು ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
'ಮಿಸ್ಟರ್ ಕರಾವಳಿ ಕ್ಲಾಸಿಕ್ 2024' ಟೈಟಲ್, ರನ್ನರ್ ಅಪ್ ಮತ್ತು ಬೆಸ್ಟ್ ಪೋಸರ್ ಸಹಿತ ಪ್ರತಿ ವಿಭಾಗಗಳಲ್ಲಿ 5 ಸ್ಥಾನಗಳ ವಿಜೇತರನ್ನು ಆಕರ್ಷಕ ನಗದು ಬಹುಮಾನ ಮತ್ತು ಮೆಡಲ್ ನೀಡಿ ಪುರಸ್ಕರಿಸಲಾಗುವುದು. ಅದೇ ದಿನ ಬೆಳಿಗ್ಗೆ 10.30ರಿಂದ ಇಂಡಿಯನ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ದಿ. ಮಾಧವ ಪೂಜಾರಿ ಸ್ಮರಣಾರ್ಥ ಟ್ರೋಫಿಯ 'ಮಿಸ್ಟರ್ ಬಿಲ್ಲವ 2024' ದೇಹದಾರ್ಢ್ಯ ಸ್ಪರ್ಧೆಯು 'ಸೀನಿಯರ್ಸ್ ಮತ್ತು ಮಾಸ್ಟರ್ಸ್' ವಿಭಾಗದಲ್ಲಿ ನಡೆಯಲಿದೆ.
ಮಿಸ್ಟರ್ ಕರಾವಳಿ ಕ್ಲಾಸಿಕ್ ಸ್ಪರ್ಧೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ.ಶಂಕರ್ ಉದ್ಘಾಟಿಸಲಿದ್ದು, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಇದರ ಅಧ್ಯಕ್ಷ ಜೆ. ನೀಲಕಂಠ ಅಧ್ಯಕ್ಷತೆ ವಹಿಸಲಿದ್ದಾರೆ. ಮಿಸ್ಟರ್ ಬಿಲ್ಲವ 2024' ಸ್ಪರ್ಧೆಯನ್ನು ಬಿಲ್ಲವರ ಸೇವಾ ಸಂಘ ಮಲ್ಪೆ ಇದರ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಉಪಾಧ್ಯಕ್ಷ ಗಂಗಾಧರ್ ಎಮ್., ಸಂಚಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್ ಉಪಸ್ಥಿತರಿದ್ದರು.