ದ್ವೇಷ ಭಾಷಣ ಮಾಡಿದ ಆರೋಪ; ಶೋಭಾ ಕರಂದ್ಲಾಜೆ-ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ದ್ವೇಷ ಭಾಷಣ ಮಾಡಿದ ಆರೋಪ; ಶೋಭಾ ಕರಂದ್ಲಾಜೆ-ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಪೊಲೀಸರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗಳ ದೂರಿನ ಮೇರೆಗೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಈ ನಡುವೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧವೂ ಹಲಸೂರು ಗೇಟ್ ಪೊಲೀಸರು ದ್ವೇಷ ಭಾಷಣದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ತಮಿಳುನಾಡಿನ ವ್ಯಕ್ತಿಯೊಬ್ಬರು ಕಾರಣ ಎಂದು ಆರೋಪಿಸಿ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಂಕೆ ಮನವಿ ಮಾಡಿತ್ತು. ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕರಂದ್ಲಾಜೆ, ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ನೀಡಿದ ದೂರಿನ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ)ಗೆ ಸೂಚಿಸಿತ್ತು.

ಗುರುವಾರ, ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಕಾಟನ್‌ಪೇಟೆ ಪೊಲೀಸರು ಕೇಂದ್ರ ಸಚಿವೆ ವಿರುದ್ಧ ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಜನರ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಸೆಕ್ಷನ್ 123 (3A), 123 (3), ಮತ್ತು 125 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಮಧ್ಯೆ, ಕಳೆದ ಭಾನುವಾರ ನಗರತ್ ಪೇಟೆಯಲ್ಲಿ 'ಆಜಾನ್' ಸಂದರ್ಭದಲ್ಲಿ 'ಹನುಮಾನ್ ಚಾಲೀಸಾ' ಹಾಕಿದ್ದಕ್ಕಾಗಿ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ತೇಜಸ್ವಿ ಸೂರ್ಯ ವಿರುದ್ಧ ಹಲಸೂರು ಗೇಟ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article