ಉತ್ತರಪ್ರದೇಶದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಬಲವಂತವಾಗಿ ಬಣ್ಣ ಎರಚಿ ಕಿರುಕುಳ; ಮೂವರು ಅಪ್ರಾಪ್ತರು ಸೇರಿದಂತೆ ನಾಲ್ಕು ಜನರ ಬಂಧನ
ಬಿಜ್ನೋರ್ (ಉತ್ತರ ಪ್ರದೇಶ): ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಇಬ್ಬರು ಮಹಿಳೆಯರಿಗೆ ಬಲವಂತವಾಗಿ ಹೋಳಿ ಹಬ್ಬದ ಹೆಸರಲ್ಲಿ ಬಣ್ಣ ಎರಚಿ ಕಿರುಕುಳ ನೀಡಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್'ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೊ ವ್ಯಾಪಕವಾಗಿ ವೈರಲ್ ಆಗುವ ಮೂಲಕ ಆದಿತ್ಯನಾಥ್ ಸರಕಾರದ ವಿರುದ್ಧ ಆಕ್ರೋಶವು ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಹಾಗೂ ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ ನಡೆದ ಈ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿದೆ. ಬೈಕ್ ಮೇಲೆ ಕುಳಿತಿದ್ದ ಮುಸ್ಲಿಂ ವ್ಯಕ್ತಿ ಹಾಗೂ ಇಬ್ಬರು ಮುಸ್ಲಿಂ ಮಹಿಳೆಯರನ್ನು ಯುವಕರ ಗುಂಪು ಸುತ್ತುವರೆಯುತ್ತದೆ. ಮೈ ತುಂಬಾ ಬಣ್ಣ ಬಳಿದುಕೊಂಡು ಹೋಳಿ ಆಡುತ್ತಿದ್ದ ಯುವಕರು ರಸ್ತೆಯಲ್ಲಿ ಸಾಗಿ ಬಂದ ಮುಸ್ಲಿಂ ಮಹಿಳೆಯರ ಮೇಲೆ ಪಿಚಕಾರಿಯಿಂದ ಬಣ್ಣ ಎರಚುತ್ತಾರೆ. ಮಹಿಳೆಯರು ಪ್ರತಿಭಟಿಸಿದರೂ ಕೂಡಾ ಯುವಕರು ತಮ್ಮ ಕಿರುಕುಳ ಮುಂದುವರೆಸುತ್ತಾರೆ.
ಇದಾದ ಬಳಿಕ ಯುವಕರ ಹುಚ್ಚಾಟ, ಆರ್ಭಟ ಇನ್ನಷ್ಟು ಹೆಚ್ಚಾಗುತ್ತದೆ. ಮಹಿಳೆಯರ ಮೇಲೆ ಬಕೆಟ್‌ನಿಂದ ನೀರು ಸುರಿಯುತ್ತಾರೆ. ಮಹಿಳೆಯರ ಮುಖ ಹಾಗೂ ಮೈ ತುಂಬಾ ಬಣ್ಣ ಬಳಿಯುತ್ತಾರೆ. ಈ ಮಹಿಳೆಯರ ಜೊತೆಗಿದ್ದ ವ್ಯಕ್ತಿಗೂ ಬಣ್ಣ ಬಳಿಯುತ್ತಾರೆ.
ಅಂತಿಮವಾಗಿ ಮುಸ್ಲಿಂ ಪುರುಷ ಹಾಗೂ ಇಬ್ಬರು ಮಹಿಳೆಯರ ಮೈ ತುಂಬಾ ಬಣ್ಣ ಬಳಿಯುವ ಯುವಕರ ಗುಂಪು ಇದು 70 ವರ್ಷಗಳ ಸಂಪ್ರದಾಯ ಎಂದು ಕೂಗುತ್ತಾರೆ. ಧಾರ್ಮಿಕ ಘೋಷಣೆಗಳನ್ನೂ ಕೂಗುತ್ತಾರೆ. ಇವರಿಂದ ಬಿಡಿಸಿಕೊಳ್ಳುವ ಮುಸ್ಲಿಂ ವ್ಯಕ್ತಿ ಹರಸಾಹಸಪಟ್ಟು ಇಬ್ಬರೂ ಮಹಿಳೆಯರನ್ನೂ ಬೈಕ್‌ನಲ್ಲಿ ಕರೆದೊಯ್ಯುತ್ತಾನೆ.
ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿದ್ದೇ ತಡ, ಬಿಜ್ನೋರ್ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಅವರು ಕೂಡಲೇ ಸ್ಥಳೀಯ ಠಾಣಾ ಪೊಲೀಸರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಮ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದ್ದೇ ತಡ ಆರೋಪಿಗಳನ್ನು ಗುರ್ತಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ, ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪ, ದೌರ್ಜನ್ಯ ಸೇರಿದಂತೆ ಹಲವು ಕಾಯ್ದೆಗಳ ಅಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಬಂಧಿತ ನಾಲ್ವರ ಪೈಕಿ ಓರ್ವ ಆರೋಪಿ ಮಾತ್ರ ಯುವಕನಾಗಿದ್ದು, ಇನ್ನು ಮೂವರು ಅಪ್ರಾಪ್ತರು. ಇವರೆಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬೇಡಿ ಎಂದು ಪೊಲೀಸರು ತಾಕೀತು ಮಾಡಿದ್ದಾರೆ. ಆದರೆ, ಮುಸ್ಲಿಂ ಮಹಿಳೆಯರ ಮೇಲೆ ಬಣ್ಣ ಎರಚಿದ ಈ ಪ್ರಕರಣ ಕೋಮು ಸೂಕ್ಷ್ಮ ತಿರುವು ಪಡೆದಿದೆ.