
ವಿಧಾನಸಭಾ ಚುನಾವಣೆಯಲ್ಲಿ ಸೋತ ಐದು ಮಂದಿ ಪ್ರಮುಖ ನಾಯಕರಿಗೆ ಮತ್ತೆ ಟಿಕೆಟ್ ನೀಡಿದ ಬಿಜೆಪಿ! ಬಿಜೆಪಿಯ ಲೆಕ್ಕಾಚಾರವೇನು ?
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಗೆಲುವಿಗಾಗಿ ಕಸರತ್ತು ಆರಂಭಿಸಿದೆ. ಬಿಜೆಪಿ ಕರ್ನಾಟಕದ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ತನ್ನ ಪಾಲಿನ ಒಂದು ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರಿಗೆ ಬಿಜೆಪಿ ಮಣೆ ಹಾಕಿರುವುದು ಕಂಡುಬಂದಿದೆ. ಒಟ್ಟು ಐವರು ಮಾಜಿ ಶಾಸಕರಿಗೆ ಬಿಜೆಪಿ ಎಂಪಿ ಟಿಕೆಟ್ ನೀಡಿದ್ದು, ಅವರ ರಾಜಕೀಯ ಜೀವನಕ್ಕೆ ಪುನರ್ಜನ್ಮ ನೀಡುವ ಪ್ರಯತ್ನವನ್ನು ಮಾಡಿದೆ.
ರಾಜ್ಯ ರಾಜಕೀಯದಲ್ಲಿ ಸಲ್ಲದವರನ್ನು ರಾಷ್ಟ್ರ ರಾಜಕೀಯಕ್ಕೆ ಕರೆದುಕೊಂಡು ಹೋಗಲು ಬಿಜೆಪಿ ಮುಂದಾಗಿದೆ. ರವಿವಾರ ಘೋಷಣೆಯಾದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಮೂವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರು. ಇಬ್ಬರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರೆ, ಒಬ್ಬರು ಬಿಜೆಪಿಯಿಂದ ಟಿಕೆಟ್ ಸಿಗದೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಉಳಿದಂತೆ ಮೊದಲ ಪಟ್ಟಿಯಲ್ಲಿ ಇಬ್ಬರು ಸೋತ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿತ್ತು.
ಜಗದೀಶ್ ಶೆಟ್ಟರ್
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ಸೇರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೆಸ್‌ನಿಂದಲೇ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದರೆ, ಈಗ ಮತ್ತೆ ಬಿಜೆಪಿಗೆ ಮರಳಿದ್ದು, ಬಿಜೆಪಿ ಬೆಳಗಾವಿ ಲೋಕಸಭಾ ಟಿಕೆಟ್ ಅನ್ನು ನೀಡಿದೆ. ಬೆಳಗಾವಿಯಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬಿಜೆಪಿ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ
63 ವರ್ಷದ ಕಾಗೇರಿ ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತರಾಗಿ ನಂತರ ಬಿಜೆಪಿಗೆ ಬಂದವರು. 1994ರಲ್ಲಿ ಮೊದಲ ಬಾರಿಗೆ ಅಂಕೋಲಾ ಕ್ಷೇತ್ರದಿಂದ ಆಯ್ಕೆಯಾದರು. ಬಿ.ಕಾಂ ಹಾಗೂ ಎಲ್.ಎಲ್‌ಬಿ ವ್ಯಾಸಂಗ ಮಾಡಿದ್ದು, ಅಂಕೋಲ ಮತ್ತು ಶಿರಸಿ ಕ್ಷೇತ್ರದಿಂದ ತಲಾ ಮೂರು ಸಲ ಆಯ್ಕೆ. ಶಿಕ್ಷಣ ಸಚಿವರಾಗಿ, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಸಂವಿಧಾನದ ಬಗ್ಗೆ ದೇಶದಲ್ಲಿ ಮೊದಲ ಬಾರಿಗೆ ಅಧಿವೇಶನದಲ್ಲಿ ಚರ್ಚೆ ನಡೆಸಿದ ಸ್ಪೀಕರ್ ಎಂಬ ಹೆಸರು ಪಡೆದಿದ್ದಾರೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಶಿರಸಿಯಲ್ಲಿ ಸೋಲು ಅನುಭವಿಸಿದ್ದರು. ಈಗ ಹಾಲಿ ಸಂಸದ ಅನಂತ ಕುಮಾರ ಹೆಗಡೆ ಬದಲಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದುಕೊಂಡಿದ್ದಾರೆ.
ಡಾ ಕೆ ಸುಧಾಕರ್
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಕಾಂಗ್ರೆಸಿನಿಂದ ಶಾಸಕರಾಗಿದ್ದರು. ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದವರಲ್ಲಿ ಪ್ರಮುಖರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಸೋಲು ಅನುಭವಿಸಿದ್ದರು. ಅದಾದ ಬಳಿಕ ಬಿಜೆಪಿಗೆ ಸರಿಯಾದ ನೆಲೆಗಟ್ಟು ಇಲ್ಲದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಈಗ ಚಿಕ್ಕಬಳ್ಳಾಪುರ ಟಿಕೆಟ್ ಅನ್ನು ಬಿಜೆಪಿ ನೀಡಿದೆ.
ಸೋಮಣ್ಣ
2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ವಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದರು. ಅದಾದ ಬಳಿಕ ಬಿಜೆಪಿ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಬಹಳ ಪ್ರಯತ್ನ ನಡೆಸಿದ್ದರು. ಸ್ಥಳೀಯರ ವಿರೋಧದ ನಡುವೆಯೂ ಈಗ ವಿ ಸೋಮಣ್ಣಗೆ ಬಿಜೆಪಿ ನಾಯಕರು ಮಣೆ ಹಾಕಿದ್ದಾರೆ.
ಶ್ರೀರಾಮುಲು
ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿ ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರು ಕೂಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ವಿರುದ್ಧ ಸೋಲು ಅನುಭವಿಸಿದ್ದರು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಐವರು ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಚಿತ್ರದುರ್ಗದಿಂದ ಗೋವಿಂದ ಕಾರಜೋಳ ಸ್ಪರ್ಧಿಸುವ ಸಾಧ್ಯತೆ ಇದೆ. ಅವರಿಗೆ ಟಿಕೆಟ್ ಅಧಿಕೃತವಾದರೆ ಒಟ್ಟು 6 ಜನ ಸೋತ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದಂತಾಗುತ್ತದೆ.