ಅನಂತಕುಮಾರ ಹೆಗಡೆಗೆ ಟಿಕೆಟ್ ನೀಡದೆ ಶಾಕ್ ಕೊಟ್ಟ ಬಿಜೆಪಿ; ಟಿಕೆಟ್ ನಿರಾಕರಿಸಲು ಇಲ್ಲಿದೆ ಕಾರಣ...
ಕಾರವಾರ: ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ 4 ವರ್ಷ ಸಾರ್ವಜನಿಕವಾಗಿ ಕಣ್ಮರೆಯಾಗಿ ಈ ಬಾರಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ 4 ತಿಂಗಳಿಂದ ಮುಂಚೂಣಿಗೆ ಬಂದಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈತಪ್ಪಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಹೆಗಡೆಗೆ ಬಿಜೆಪಿ ಶಾಕ್ ನೀಡಿದೆ.
ಹಿಂದೂ ಫೈರ್ ಬ್ರ್ಯಾಂಡ್ ಎಂದೆ ಹೆಸರುವಾಸಿಯಾಗಿರುವ ಹೆಗಡೆ, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಸಿಎಂ ಸಿದ್ದರಾಮಯ್ಯ ಮೇಲೆ ಮುಗಿ ಬಿದ್ದು, ಪ್ರಧಾನಿ ಮೋದಿಯವರನ್ನು ಹೊಗಳುವ ಮೂಲಕ ಹೈಕಮಾಂಡ್ ನಾಯಕರನ್ನು ಗಮನವನ್ನು ತಮ್ಮತ್ತ ಸೆಳೆದುಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದರು ಕೂಡ ಪ್ರಯೋಜನವಾಗಲಿಲ್ಲ.
ಚುನಾವಣಾ ರಾಜಕೀಯದಿಂದ ವಿಮುಖರಾಗಿರುವುದಾಗಿ ಹೇಳಿದ್ದ ಅನಂತ ಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾದರೂ ಟಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ. ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಮೀರಿತ್ತು. ಅನಂತರ ಕುಮಾರ್ ಹೆಗಡೆ ಬದಲಿಗೆ ಪ್ರಮುಖವಾಗಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಮತ್ತು ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರು ಮುನ್ನಲೆಗೆ ಬಂದಿತ್ತು. ಕೊನೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಸಿಕ್ಕಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ತನ್ನದೆ ಆದ ಕಾರ್ಯರ್ತರನ್ನು ಹೊಂದಿರುವ ಅನಂತ ಕುಮಾರ ಹೆಗಡೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಒಂದೆ ಒಂದು ಬಾರಿ ಪ್ರಚಾರ ಮಾಡಲಿಲ್ಲ. ತನಗೂ ವಿಧಾನಸಭಾ ಚುನಾವಣೆಗೂ ಸಂಬಂಧ ಇಲ್ಲ ಎಂಬಂತೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಅಷ್ಟೆ ಅಲ್ಲದೆ ಕಾರವಾರ ಹಾಗೂ ಶಿರಸಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಅನಂತ ಕುಮಾರ ಹೆಗಡೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಿದರು ಎಂಬ ಆರೋಪ ಜಿಲ್ಲೆಯಲ್ಲಿದೆ.
ವಿಧಾನಸಭಾ ಚುನಾವಣೆ ಪ್ರಚಾರಕ್ಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಅಂಕೊಲಾಗೆ ಬಂದರೂ ಸಹಿತ ಪ್ರಧಾನಿ ಸ್ವಾಗತಕ್ಕೆ ಬಾರದೆ ಮನೆಯಲ್ಲಿ ಉಳಿದುಕೊಂಡಿದ್ದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಕಾರ್ಯರ್ತರ ಸಭೆಯನ್ನು ಉದ್ದೆಶಿಸಿ ಮಾತನಾಡುವಾಗ, ಹಿಂದೂತ್ವ ರಾಷ್ಟ್ರೀಯತೆ ಬಗ್ಗೆ ಭಾಷಣ ಮಾಡುವ ಭರದಲ್ಲಿ ಸಂವಿಧಾನ ತಿದ್ದುಪಡಿ ಬಗ್ಗೆ ನೀಡಿರುವ ಹೇಳಿಕೆ ಬಿಜೆಪಿ ಪಕ್ಷಕ್ಕೆ ಭಾರಿ ಮುಜುಗರ ಉಂಟು ಮಾಡಿತ್ತು.
ಅಬಕಿ ಬಾರ್ ಚಾರಸೊ ಪಾರ ಎಂಬ ಮೋದಿ ಮಾತಿನ ಗುಟ್ಟು ಬಿಚ್ಚಿಟ್ಟಿದ್ದ ಹೆಗಡೆ. ಸಂವಿಧಾನ ತಿದ್ದುಪಡಿ ಮಾಡಲು ನಮಗೆ 400 ಸೀಟಿನ ಅವಶ್ಯಕತೆ ಇದೆ. ಅದಕ್ಕಾಗಿ ಮೋದಿ ಈ ಬಾರಿ 400 ಸೀಟು ಗೆಲ್ಲಿಸುವ ಗುರಿ ಹೊಂದಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಆರು ಬಾರಿ ಗೆಲುವು ಸಾಧಿಸಿರುವ ಅನಂತ ಕುಮಾರ ಹೆಗಡೆ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇನ್ನೂ ಅಭಿವೃದ್ಧಿ ಮಾಡುವುದು ನನ್ನ ಕೆಲಸವೆ ಅಲ್ಲ ನಮ್ಮದೇನಿದ್ದರೂ ಶಾಸನ ರಚನೆ ಮಾಡುವುದಷ್ಟೆ ನಮ್ಮ ಕೆಲಸ ಎನ್ನುತ್ತಿರುವುದು ಮತಯಾಚಣೆ ಮಾಡಲು ಬಿಜೆಪಿ ಕಾರ್ಯರ್ತರಿಗೂ ಭಾರಿ ಮುಜುಗರ ಉಂಟು ಮಾಡಿತ್ತು.