ಬಿಜೆಪಿಗೆ ಸೇರದೆ ಹೋದರೆ ಮುಂಬರುವ ದಿನಗಳಲ್ಲಿ ಇ.ಡಿ ನನ್ನನ್ನೂ ಬಂಧಿಸುತ್ತದೆ: ಎಎಪಿ ಸಚಿವೆ ಅತಿಶಿ ಆತಂಕ
ನವದೆಹಲಿ: ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ತಮ್ಮ ಪಕ್ಷ ಸೇರುವಂತೆ ನನ್ನ ಆಪ್ತ ಸಹಾಯಕರೊಬ್ಬರ ಮೂಲಕ ಬಿಜೆಪಿ ನನ್ನನ್ನು ಸಂಪರ್ಕಿಸಿದೆ ಎಂದು ಹೇಳಿರುವ ಎಎಪಿ ಸಚಿವೆ ಅತಿಶಿ, ಒಂದು ವೇಳೆ ಬಿಜೆಪಿಗೆ ಸೇರದೆ ಹೋದರೆ ಮುಂಬರುವ ದಿನಗಳಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ನನ್ನನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನನ್ನನ್ನು ಸೇರಿದಂತೆ ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾರನ್ನು ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
‘ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದರು ಕೂಡ ಎಎಪಿ ಬಲಿಷ್ಠವಾಗಿ ನಿಂತಿದೆ ಎಂದು ಬಿಜೆಪಿಗೆ ಅನಿಸುತ್ತಿದೆ. ಈಗ ಅದು ಎಎಪಿಯ ಮುಂದಿನ ನಾಯಕನನ್ನು ಜೈಲಿಗೆ ಹಾಕಲು ಯೋಜಿಸುತ್ತಿದೆ. ಸೋಮವಾರ ನ್ಯಾಯಾಲಯದ ಮುಂದೆ ಇ.ಡಿ ನನ್ನ ಮತ್ತು ಸೌರಭ್ ಭಾರಧ್ವಜ್ ಅವರ ಹೆಸರು ಹೇಳಿರುವುದೇ ಇದಕ್ಕೆ ಸಾಕ್ಷಿ’ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ಕೊಡುತ್ತಾರೆಯೇ ಎಂಬ ಪ್ರಶ್ನೆಗೆ, ‘ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾಗಿದ್ದರೆ, ಸಾರ್ವಜನಿಕ ಪ್ರತಿನಿಧಿಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಪ್ರಜಾಪ್ರತಿನಿಧಿ ಕಾಯ್ದೆ ಹೇಳುತ್ತದೆ. ಅರವಿಂದ ಕೇಜ್ರಿವಾಲ್ ಅವರಿಗೆ ಶಿಕ್ಷೆಯಾಗಿಲ್ಲ. ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಬಹುಮತ ಹೊಂದಿದ್ದಾರೆ. ಆದ್ದರಿಂದ ರಾಜೀನಾಮೆ ನೀಡಲು ಕೇಜ್ರಿವಾಲ್‌ಗೆ ಯಾವುದೇ ಕಾರಣವಿಲ್ಲ’ ಎಂದು ಹೇಳಿದರು.