
ಮಣಿಪಾಲ ಸರಳೇಬೆಟ್ಟುವಿನಲ್ಲಿ ಮನೆಯೊಳಗೆ ನುಗ್ಗಿ ಕೋಳಿಗಳನ್ನು ಬಲಿ ಪಡೆದ ಚಿರತೆ
Tuesday, April 2, 2024
ಮಣಿಪಾಲ: ಮಣಿಪಾಲ ಸಮೀಪದ ಸರಳೇಬೆಟ್ಟು ಪರಿಸರದಲ್ಲಿ ಮತ್ತೆ ಚಿರತೆ ಹಾವಳಿ ಕಂಡುಬಂದಿದ್ದು, ಮನೆಯೊಂದರ ಕೋಳಿ ಗೂಡಿಗೆ ಲಗ್ಗೆ ಇಟ್ಟ ಚಿರತೆ, ಕೋಳಿಗಳನ್ನು ಬಲಿ ಪಡೆದುಕೊಂಡಿದೆ.
ಸರಳೇಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜ ಎಂಬವರ ಮನೆಗೆ ರಾತ್ರಿ ಹೊತ್ತಿನಲ್ಲಿ ದಾಳಿ ನಡೆಸಿದ ಚಿರತೆ, ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ತಿಂದಿದೆ. ಒಂದು ಕೋಳಿಯನ್ನು ಗೂಡಿನಲ್ಲಿಯೇ ಬಿಟ್ಟು ಓಡಿ ಹೋಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ.
ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸರಳೇಬೆಟ್ಟು, ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಳ, ಸಣ್ಣಕ್ಕಿಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಈ ಪರಿಸರದಲ್ಲಿ ಎರಡು ಮೂರು ಚಿರತೆ ಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮತ್ತೆ ಈ ಭಾಗದಲ್ಲಿ ಚಿರತೆ ಕಾಣಿಸಿ ಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿದೆ.