ಸರಳ ಸಜ್ಜನಿಕೆಯ ಕೋಟರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸೋಣ: ಅಣ್ಣಾಮಲೈ
ಉಡುಪಿ : ಸರಳ ಸಜ್ಜನಿಕೆಯ ಕೋಟ ಶ್ರೀನಿವಾಸ ಪೂಜಾರಿಯವರು ಈ ಭಾಗದಲ್ಲೇ ಹುಟ್ಟಿದವರು, ಅವರಿಗೆ ಮತಚಲಾಯಿಸುವ ಮೂಲಕ ದಾಖಲೆ ಅಂತರದಲ್ಲಿ ಅವರನ್ನು ಗೆಲ್ಲಿಸೋಣ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ವತಿಯಿಂದ ಮಂಗಳವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಬೈಕ್ ರಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ ಕೇಂದ್ರ ಸರಕಾರ 11 ಕೋಟಿ ಶೌಚಾಲಯ ಗಳನ್ನು ನಿರ್ಮಿಸಿಕೊಟ್ಟರೂ ಕಾಂಗ್ರೆಸ್‌ನವರು ಮಾತ್ರ ಇನ್ನೂ ಚೊಂಬು ಹಿಡಿದುಕೊಂಡು ತಿರುಗುತ್ತಿದ್ದಾರೆ. ರಾಜ್ಯದಲ್ಲಿ 12 ಕಾಂಗ್ರೆಸ್ ಅಭ್ಯರ್ಥಿಗಳು ಮಂತ್ರಿಗಳ ಮನೆಯ ವರು. ಇಂತಹ ಪರಿವಾರವಾದ ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ. ಆದ್ದರಿಂದ ಜನ ಕಾಂಗ್ರೆಸ್‌ನ್ನು ತಿರಸ್ಕರಿಸುವ ದಿನ ಬಂದಿದೆ ಎಂದು ಅಣ್ಣಾಮಲೈ ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಮುಖಂಡರಾದ ಕಿದಿಯೂರು ಉದಯ ಕುಮಾರ್ ಶೆಟ್ಟಿ ಸುಪ್ರಸಾದ ಶೆಟ್ಟಿ ಬೈಕಾಡಿ, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಸುಧೀರ್ ಕೆ.ಎಸ್., ಸತೀಶ್ ಪೂಜಾರಿ ವಕ್ವಾಡಿ ರಾಜೇಶ್ ಕಾವೇರಿ, ನಯನಾ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.