ಈ ಬಾರಿ ಜನ ಎನ್‌ಡಿಎ ಕೂಟವನ್ನು ತಿರಸ್ಕರಿಸಲಿದ್ದು ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ: ತೇಜಸ್ವಿನಿ ಗೌಡ; ಕಾಪುನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಬೃಹತ್ ವಾಹನ ಜಾಥಾ-ಸಾರ್ವಜನಿಕ ಸಭೆ
ಕಾಪು: ಹಿಂದೆ ರಾಷ್ಟ್ರ ಮೊದಲು ಹೇಳುತ್ತಿ ಬಿಜೆಪಿಯು ಈಗ ತಮ್ಮ ಬಿಜೆಪಿ ಪಕ್ಷವನ್ನೂ ಬದಿಗೆ ಸರಿಸಿ ಒಬ್ಬ ವ್ಯಕ್ತಿಯನ್ನೇ ಮುಂದೆ ಮಾಡುತ್ತಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿ ಮೇಲೆ ಜನ ಇಟ್ಟಿದ್ದ ಭರವಸೆ ಹುಸಿ ಯಾಗಿದೆ. ಈ ಬಾರಿ ಜನರು ಎನ್‌ಡಿಎ ಕೂಟವನ್ನು ತಿರಸ್ಕರಿಸಲಿದ್ದು ನಿಸ್ಸಂಶವಾಗಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ, ಮಾಜಿ ಸಂಸದೆ ತೇಜಸ್ವಿನಿ ಗೌಡ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರವಾಗಿ ಪಡುಬಿದ್ರಿಯಿಂದ ಕಾಪುವರೆಗೆ ವಾಹನ ಜಾಥಾ ಹಾಗೂ ಕಾಪು ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 10 ವರ್ಷಗಳ ಬಿಜೆಪಿ ಸರಕಾರ ಮತ್ತು 10 ತಿಂಗಳ ಕಾಂಗ್ರೆಸ್ ಸರಾಕಾರದ ನಡುವಿನ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಈ ದೇಶದಲ್ಲಿ ಮನುಷ್ಯರು ಇದ್ದಾರೆ ಎಂಬುದನ್ನು ಬಿಜೆಪಿ ಮರೆತಂತಿದೆ. ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿದ್ದಾಗ ಅವರ ಅಧಿಕಾರಾವಧಿಯಲ್ಲಿ ಯಾರ ದಾರಿ ತಪ್ಪಿಸಿದರು ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯ ಗಳ ವಿಚಾರದಲ್ಲಿ ನ್ಯಾಯಾಲಯವು ಕಾನೂನುಬದ್ಧವಾಗಿ ಮಧ್ಯಪ್ರವೇಶಿಸಿದೆ. ಜನಹಿತಕ್ಕಾಗಿ ನಾವು ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ. ನಮ್ಮ ಶಕ್ತಿ ಇರುವುದು ಜನಸೇವೆ ಮಾಡುವುದರಲ್ಲಿಯೇ ಹೊರತು ಬೆಂಗಳೂರು, ದೆಹಲಿಯಲ್ಲಿ ಅಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತ ಲತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಮುಖಂಡರಾದ ಜಿ.ಎ.ಬಾವಾ, ಎಂ.ಎ. ಗಫೂರ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪಡುಬಿದ್ರಿಯಿಂದ ಕಾಪುವರೆಗೆ ವಾಹನ ರ್ಯಾಲಿ ನಡೆಯಿತು.