ಬೇಕಲ್ ಉಸ್ತಾದರ ಪುತ್ರನಿಂದ ಇದೊಂದು ಉತ್ತಮ ಯೋಚನೆ!
ಇವತ್ತು ಮರ್ಹೂಮ್ ಬೇಕಲ್ ಉಸ್ತಾದರ ಪುತ್ರ ಸ್ವಾಲಿಹ್ ರವರ ಮಗಳ ಎಂಗೇಜ್ ಮೆಂಟ್. ಜೊತೆಗೇ ನಿಕಾಹ್ !
ಸ್ವಾಲಿಹ್ ರವರು ನನ್ನ ಆಪ್ತಮಿತ್ರ ಮತ್ತು ಬಿಸ್ನೆಸ್ ಪಾರ್ಟ್ನರ್ ಆಗಿರುವುದರಿಂದ ನಾವು ತುಂಬಾ ಕ್ಲೋಸು.
ಈ ಒಂದು ಯೋಚನೆ ನೀವು ಯಾಕೆ ಮಾಡಿದಿರಿ ಎಂದು ಮೊನ್ನೆಯೇ ಕೇಳಿದ್ದೆ. ಸಾಮಾನ್ಯವಾಗಿ ಎಂಗೇಜ್ಮೆಂಟ್ ದಿನದಂದು ನಿಕಾಹ್ ನಡೆಯುವ ರೂಢಿ ಇಲ್ಲ. ನನ್ನ ಅನುಭವದಲ್ಲಿ ಇದು ವರೆಗೂ ನಾನು ಇಂತಹ ಕ್ರಮ ಕಂಡಿರಲಿಲ್ಲ. ಆದರೆ ಸ್ವಾಲಿಹ್ ರವರು ಯಾಕೆ ಈ ಒಂದು ಹೊಸ ಯೋಚನೆ ಮಾಡಿದರು ಎಂಬ ಕುತೂಹಲದಿಂದ ಕೇಳಿದ್ದೆ.
ಅದಕ್ಕೆ ಅವರು ಹೇಳಿದ್ದು ಹೀಗೆ;
"ಎಂಗೇಜ್ಮೆಂಟ್ ದಿನ ವರ ಮತ್ತು ವಧುವನ್ನು ಅಕ್ಕಪಕ್ಕ ನಿಲ್ಲಿಸಿ ಫೋಟೋ ತೆಗೆಯುತ್ತಾರೆ. ವಧೂವರರು ಮದುವೆಗೆ ಮುನ್ನ ಜಸ್ಟ್ ಒಂದು ನೋಟ ಮಾತ್ರ ಶರೀಅತ್ ನಲ್ಲಿ ಅನುವದನೀಯವಾಗಿದ್ದು ಹೆಚ್ಚಿಗೆ ಒಡನಾಟ, ಮುಕ್ತ ಬೆರೆಯುವಿಕೆ ನಿಷಿದ್ಧವಾಗಿದೆ. ಅಲ್ಲದೆ ವರನು ವಧುವಿಗೆ ಹೊಸ ಮೊಬೈಲ್ ಕೊಟ್ಟೇ ಕೊಡುತ್ತಾನೆ. ಆ ಮೇಲೆ ಮದುವೆ ತನಕ ಅವರು ಪರಸ್ಪರ ಮಾತುಕತೆ, ಚಾಟಿಂಗ್ ನಡೆಸುತ್ತಲೇ ಇರುತ್ತಾರೆ. ನಿಕಾಹ್ ಆಗುವ ತನಕ ಅವರು ಅನ್ಯ ಸ್ತ್ರೀ ಪುರುಷರಾಗಿರುವುದರಿಂದ ಇದೂ ಕೂಡಾ ಧರ್ಮಬಾಹಿರವಾಗಿದೆ. ಆದ್ದರಿಂದ ಎಂಗೇಜ್ಮೆಂಟ್ ದಿನದಂದೇ ನಿಕಾಹ್ ಮಾಡಿ ಬಿಟ್ಟರೆ ಇದೆಲ್ಲ ಅವರಿಗೆ ಹಲಾಲ್ ಆಗುತ್ತದೆ. ನಮ್ಮ ಮಕ್ಕಳನ್ನು ಹರಾಮ್ ನಿಂದ ತಪ್ಪಿಸಲು ಇದೊಂದೇ ಮಾರ್ಗ ಎಂದು ನನಗನ್ನಿಸಿತು"
ನಿಜಕ್ಕೂ ಅವರ ಮಾತು ಕೇಳಿ ನನಗೆ ಖುಶಿಯಾಯಿತು. ಇಂದಿನ ಕಾಲದಲ್ಲಿ ಮದುವೆ ಸಂಬಂಧವಾಗಿ ನಡೆಯುವ ಅನಿಸ್ಲಾಮಿಕ ಚಟುವಟಿಕೆಗಳನ್ನು ಹಿರಿಯರಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಎಷ್ಟೇ ನಿಯಂತ್ರಿಸಿದರೂ ಹಿರಿಯರ ಗಮನಕ್ಕೆ ಬಾರದ ಹಾಗೆ ಯುವಕ ಯುವತಿಯರು ತಪ್ಪು ಮಾಡೇ ಮಾಡ್ತಾರೆ. ಇದಕ್ಕೆ ನನ್ನ ಅನುಭವದಲ್ಲಿರುವ ಒಂದು ಉದಾಹರಣೆ ಹೇಳ್ತೇನೆ: ಒಂದು ಕಡೆ ವರನು ವಧುವಿಗೆ ಮೊಬೈಲ್ ಕೊಡಬಾರದು ಎಂದು ವಧುವಿನ ಅಪ್ಪ ತಾಕೀತು ಮಾಡಿದ್ದರು. ಆಗಲಿ ಕೊಡುವುದಿಲ್ಲ ಎಂದು ವರನು ಒಪ್ಪಿಕೊಂಡಿದ್ದ.
ಎಂಗೇಜ್ಮೆಂಟ್ ನಡೆಯಿತು. ವರನು ಹೊಸ ಮೊಬೈಲ್ ಕೊಡಲಿಲ್ಲ. ಹುಡುಗಿಯ ಅಪ್ಪನಿಗೆ ಸಮಾಧಾನವಾಯಿತು. ಆದರೆ ವರನು ಹುಡುಗಿಯ ಸಹೋದರನ ಮೂಲಕ ಕದ್ದು ಮುಚ್ಚಿ ಮೊಬೈಲ್ ಕೊಡಿಸಿದ್ದ. ಮದುವೆ ನಡೆಯಯುವ ದಿನದ ವರೆಗೂ ಅವರೊಳಗೆ ಚಾಟಿಂಗ್ ನಡೆದಿತ್ತು! ಅಪ್ಪ ತಾಕೀತು ಮಾಡಿದ್ದರೂ ಮಗ ಮತ್ತು ಮಗಳು ಈ ಕಳ್ಳಾಟಕ್ಕೆ ಸಾಥ್ ನೀಡಿ ಅಪ್ಪನ ಸದುದ್ದೇಶವನ್ನು ವಿಫಲಗೊಳಿಸಿದ್ದರು.
ಮದುವೆಗೆ ಮೊದಲಿನ ಚಾಟಿಂಗ್ ನಿಂದ ಹುಡುಗಿಯ ಕೆಲವು ಮಾತು, ವರ್ತನೆಗಳು ಸರಿಕಾಣದೆ ಮದುವೆ ಮುರಿದು ಬಿದ್ದ ಅನುಭವಗಳೂ ಇವೆ. ವರನ ಕೆಲವು ನಡೆ, ನುಡಿ ಹಿಡಿಸದೆ ವಧುವೇ ತಿರಸ್ಕರಿಸಿದ ಘಟನೆಗಳೂ ಇವೆ. ಒಟ್ಟಾರೆ ವಿವಾಹ ಪೂರ್ವ ಚಾಟಿಂಗ್ ಯಾವ ನೆಲೆಯಲ್ಲೂ ಒಳ್ಳೆಯದಲ್ಲ ಎಂದರ್ಥ. ವಿವಾಹಕ್ಕೆ ಮೊದಲೇ ಎಲ್ಲಾ ಸರಸ ಸಲ್ಲಾಪಗಳನ್ನು ಮುಗಿಸಿದ್ದರೆ ವಿವಾಹ ನಂತರ ರೋಮ್ಯಾಂಟಿಕ್ ಇಲ್ಲದೆ ಸಪ್ಪೆಯಾಗುವ ಛಾನ್ಸು ಕೂಡಾ ಇದೆ.
ಬೇಕಲ್ ಉಸ್ತಾದರ ಪುತ್ರನ ಈ ಹೊಸ ಯೋಜನೆ ಇಂದಿನ ಕಾಲದಲ್ಲಿ ಇತರರಿಗೂ ಅನುಸರಿಸಬಹುದಾದ ಒಂದು ಉತ್ತಮ ಮಾದರಿ ಎಂದಾಗಿದೆ ನನ್ನ ಅಭಿಪ್ರಾಯ.
-ಡಿ.ಐ. ಅಬೂಬಕರ್ ಕೈರಂಗಳ