ಸುವರ್ಣಸೌಧದ ಮುಂಭಾಗದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದವರ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ; ಚಾಲಕ-ಕ್ಲೀನರ್ ಗಂಭೀರ; ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರು ತೀವ್ರವಾಗಿ ಥಳಿಸಿ ಹಲ್ಲೆ ಮಾಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಲಾರಿಯನ್ನು ಹೆದ್ದಾರಿಯಲ್ಲಿ ತಡೆದ ಸಂಘಪರಿವಾರದ ಕಾರ್ಯಕರ್ತರು ಚಾಲಕನನ್ನು ಲಾರಿಯಿಂದ ಹೊರಗೆಳೆದು ತೀವ್ರವಾಗಿ ಥಳಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾಸರಗೋಡು ಮೂಲದ ಲಾರಿ ಚಾಲಕ ಉಮರ್ ಮೋಯಿದ್ದೀನ್ ಹಾಗು ಕ್ಲೀನರ್ ಸುನಿಲ್ ಕುಮಾರ್ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ರೋಹನ್ ಜಗದೀಶ್ ಪರಿಶೀಲನೆ ನಡೆಸಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುತ್ತೇವೆ. ಸಂಜೆ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ತಡೆದ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಚಾಲಕ ಹಾಗೂ ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೋಹನ್ ಜಗದೀಶ್ ಹೇಳಿದ್ದಾರೆ.
ಅಕ್ರಮವಾಗಿ ಗೋವು ಸಾಗಿಸುತ್ತಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಾಗಿಸಲಾಗುತ್ತದೆ. ಹಲ್ಲೆ ಮಾಡಿದವರ ಮೇಲೆಯೂ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ರೋಹನ್ ಜಗದೀಶ್ ತಿಳಿಸಿದ್ದಾರೆ. ಸದ್ಯ ಲಾರಿಯಲ್ಲಿದ್ದ 28 ಗೋವುಗಳನ್ನು ಕಮಕಾರಟ್ಟಿಯಲ್ಲಿರುವ ಮಹಾವೀರ ಗೋ ಶಾಲೆಗೆ ಶಿಫ್ಟ್ ಮಾಡಲಾಗಿದೆ.