ನೀರು ತುಂಬಿಸುವ ವೇಳೆ ಮೇಲ್ವರ್ಗದ ವ್ಯಕ್ತಿಯೊಬ್ಬನ ಬಕೆಟ್ ಮುಟ್ಟಿದ್ದಕ್ಕಾಗಿ ದಲಿತ ಬಾಲಕನ ಮೇಲೆ ಅಮಾನುಷ ಹಲ್ಲೆ!
ಜೈಪುರ: ಹ್ಯಾಂಡ್ ಪಂಪ್‌ನಿಂದ ನೀರು ತುಂಬಿಸುವ ವೇಳೆ ಮೇಲ್ವರ್ಗದ ವ್ಯಕ್ತಿಯೊಬ್ಬನಿಗೆ ಸೇರಿದ ಬಕೆಟ್ ಅನ್ನು ಮುಟ್ಟಿದ್ದಕ್ಕಾಗಿ ದಲಿತ ಸಮುದಾಯದ 8 ವರ್ಷದ ಬಾಲಕನೊಬ್ಬನನ್ನು ಅಮಾನುಷವಾಗಿ ಥಳಿಸಿದ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ.
ಹ್ಯಾಂಡ್ ಪಂಪ್‌ನಿಂದ ನೀರು ತುಂಬಿಸುವ ವೇಳೆ ನಡೆದ ಘಟನೆ ಸಂಬಂಧ ಬಾಲಕನ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಅಲ್ವಾರ್‌ನ ಮಂಗಳೇಶಪುರ ಎಂಬ ಗ್ರಾಮದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಎಂಟು ವರ್ಷದ ಬಾಲಕ ಚಿರಾಗ್, ಬಾಯಾರಿಕೆಯಾಗಿದ್ದರಿಂದ ತನ್ನ ಶಾಲೆಯಲ್ಲಿ ಅಳವಡಿಸಿರುವ ಹ್ಯಾಂಡ್ ಪಂಪ್‌ನಿಂದ ನೀರು ಪಡೆಯಲು ಶನಿವಾರ ತೆರಳಿದ್ದಾಗ ಘಟನೆ ನಡೆದಿದೆ.
ತನ್ನ ಮಗ ನೀರು ತುಂಬಿಸಿಕೊಳ್ಳುವಾಗ, ರತಿರಾಮ್ ಠಾಕೂರ್ ಎಂಬಾತನಿಗೆ ಸೇರಿದ ನೀರಿನ ಬಕೆಟ್ ಅನ್ನು ಆಕಸ್ಮಿಕವಾಗಿ ಮುಟ್ಟಿದ್ದ ಎಂದು ಬಾಲಕನ ತಂದೆ ಪನ್ನಲಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಠಾಕೂರ್, ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ತನ್ನ ಬಕೆಟ್ ಮುಟ್ಟಲು ಎಷ್ಟು ಧೈರ್ಯ ಎಂದು ಕೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಮನೆಗೆ ಮರಳಿದ ಬಾಲಕ, ಶಾಲೆಯಲ್ಲಿ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾನೆ. ಬಳಿಕ ಪನ್ನಲಾಲ್ ಕುಟುಂಬದವರು ಆರೋಪಿ ಠಾಕೂರ್ ಮನೆಗೆ ಹೋಗಿ ಆತನನ್ನು ಪ್ರಶ್ನಿಸಿದ್ದಾರೆ. ಆದರೆ ಅಲ್ಲಿಯೂ ಆತ ದರ್ಪ ಮೆರೆದಿದ್ದಾನೆ. ನೀವೆಲ್ಲರೂ ಕೆಳಜಾತಿಗೆ ಸೇರಿದವರಾಗಿರುವುದರಿಂದ ಕೊಂದು ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಪನ್ನಲಾಲ್ ದೂರಿನಲ್ಲಿ ಹೇಳಿದ್ದಾರೆ. ಕ್ಷಮೆ ಕೋರಲು ನಿರಾಕರಿಸಿದ್ದಲ್ಲದೆ, ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾನೆ.
ಈ ಬಗ್ಗೆ ಪನ್ನಲಾಲ್ ಕುಟುಂಬದವರು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆದರೆ ಅವರು ಇದು ಪೊಲೀಸ್ ಪ್ರಕರಣವಾಗಿದೆ. ಹೀಗಾಗಿ ನೀವು ಪೊಲೀಸ್ ಠಾಣೆಗೆ ಹೋಗುವುದು ಒಳಿತು ಎಂದು ಅವರಿಗೆ ಸಲಹೆ ನೀಡಿದ್ದಾರೆ.
ರಾಮಗಢ ಪೊಲೀಸ್ ಠಾಣೆಯಲ್ಲಿ ಪನ್ನಲಾಲ್ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣ ಸಂಬಂಧ ತನಿಖೆ ಆರಂಭಿಸಲಾಗಿದೆ. ಆರೋಪಿ ರತಿರಾಮ್ ಠಾಕೂರ್ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ತಂಡವೊಂದನ್ನು ರಚಿಸಿದ್ದಾರೆ.
ಹ್ಯಾಂಡ್ ಪಂಪ್ ಶಾಲೆಯ ಗಡಿಯ ಒಳಗೆ ಇದೆ. ಇಲ್ಲಿಗೆ ಹಳ್ಳಿಯ ಇತರೆ ಜನರು ಕೂಡ ಹೋಗಿ ನೀರು ತರುತ್ತಾರೆ. ಈ ಘಟನೆ ಬಳಿಕ ಭಯಗೊಂಡಿರುವ ಮಗ ಶಾಲೆಗೆ ಹೋಗಲು ಹೆದರುತ್ತಿದ್ದಾನೆ. ಪೊಲೀಸರಿಗೆ ನೀಡಿರುವ ದೂರು ವಾಪಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾನೆ. ಶಾಲೆಗೆ ಹೋದರೆ ಆ ವ್ಯಕ್ತಿ ಮತ್ತೆ ಬಂದು ಹೊಡೆಯುತ್ತಾನೆ ಎಂದು ಭಯ ಅವನಲ್ಲಿ ಆವರಿಸಿದೆ ಎಂದು ಪನ್ನಲಾಲ್ ತಿಳಿಸಿದ್ದಾರೆ.