ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸಲು ನಾರಾಯಣ ಗುರು ವಿಚಾರ ವೇದಿಕೆ ನಿರ್ಧಾರ: ಸತ್ಯಜಿತ್ ಸುರತ್ಕಲ್
ಮಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳನ್ನು ಬದಿಗಿಟ್ಟು ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸಲು ನಾರಾಯಣ ಗುರು ವಿಚಾರ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
ದ.ಕ., ಉಡುಪಿ- ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಲ್ಲವ ಅಭ್ಯರ್ಥಿಗಳನ್ನು ವೇದಿಕೆ ಬೆಂಬಲಿಸಲಿದೆ ಎಂದು ಸತ್ಯಜಿತ್ ಸುರತ್ಕಲ್ ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ದೊರೆತಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೆ, ಬಿಜೆಪಿ ಒಂದು ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಹೀಗಾಗಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ನಾರಾಯಣ ಗುರು ವಿಚಾರ ವೇದಿಕೆ ಬೆಂಬಲಿಸಲಿದೆ ಎಂದರು.
ಬಿಜೆಪಿಯಲ್ಲಿ 33 ವರ್ಷಗಳ ನಂತರ ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಅವಕಾಶ ದೊರೆತಿದೆ. ಕಾಂಗ್ರೆಸ್ ನಲ್ಲಿ ಜನಾರ್ದನ ಪೂಜಾರಿಯವರು ಸೋತ ನಂತರ ಮತ್ತೆ ಬಿಲ್ಲವರಿಗೆ ಅವಕಾಶ ಸಿಕ್ಕಿರಲಿಲ್ಲ. ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಈ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಸೇರಿಸಿದರೆ 12 ಲಕ್ಷಕ್ಕೂ ಅಧಿಕ ಬಿಲ್ಲವ ಮತದಾರರು ಇದ್ದಾರೆ. ನಮ್ಮ ಸಮುದಾಯದ ಅಭ್ಯರ್ಥಿ ಜನಪ್ರತಿನಿಧಿಯಾಗಿ ಆಯ್ಕೆಯಾದರೆ, ಸಮುದಾಯದ ಶೈಕ್ಷಣಿಕ, ಆರ್ಥಿಕ ಉನ್ನತಿಗೆ ಅನುಕೂಲ ಎಂದು ಹೇಳಿದರು.
ದ.ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗದಲ್ಲಿ ಸಮಾಜದ 12 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ನಮ್ಮ ಸಮಾಜ ಬಹುಸಂಖ್ಯಾತ ಸಮಾಜವಾಗಿದೆ. ಆದರೆ ಬಿಜೆಪಿಯಿಂದ 33 ವರ್ಷಗಳಿಂದ ಈ ನಾಲ್ಕೂ ಕ್ಷೇತ್ರಗಳಲ್ಲಿಯೂ ಸಮಾಜದ ಅಭ್ಯರ್ಥಿಗೆ ಅವಕಾಶ ನೀಡಲಾಗಿಲ್ಲ. ಕಾಂಗ್ರೆಸ್‌ನಲ್ಲಿ ನಾಲ್ಕನೆ ಬಾರಿ ಜನಾರ್ದನ ಪೂಜಾರಿ ಸೋತ ಬಳಿಕ ಕಳೆದ ಬಾರಿ ದ.ಕ.ದಲ್ಲಿ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು.
ಎಸ್‌ಎನ್‌ಜಿವಿ ಸಂಘಟನೆ ಆರಂಭವಾದ ಶಿವಮೊಗ್ಗದ ಸಿಗಂದೂರಿನಲ್ಲಿ ಆರಂಭಗೊಂಡ ಹೋರಾಟ ಬ್ರಹ್ಮಶ್ರೀ ನಾರಾಯಣಗುರುಗಳ ಟ್ಯಾಬ್ಲೋ ವಿಚಾರ, ಪಠ್ಯಪುಸ್ತಕ, ಅಭಿವೃದ್ಧಿ ನಿಗಮ, ಕಾಂತರಾಜು ವರದಿ ಹೋರಾಟ, ವಿಮಾನ ನಿಲ್ದಾಣಕ್ಕೆ ಕೋಟಿಚನ್ನಯ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪರ ಹೆಸರಿಡುವ ಹೋರಾಟ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಇದರ ಪರಿಣಾಮವಾಗಿ ಸಮಾಜಕ್ಕೆ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು, ಕಾಂಗ್ರೆಸ್‌ನಿಂದ ಶಿವಮೊಗ್ಗ ಹಾಗೂ ದ.ಕ.ದಲ್ಲಿ ಅವಕಾಶ ನೀಡಲಾಗಿದೆ.
ಸಮಾಜದ ಸಂಘಟನೆಯಾಗಿ, ಸಮಾಜವನ್ನು ಗೆಲ್ಲಿಸಲು, ಪಕ್ಷವನ್ನು ಪಕ್ಕಕ್ಕಿಟ್ಟು ಸಮಾಜದ ಅಭ್ಯರ್ಥಿಗಳಾದ ಪದ್ಮರಾಜ್ ಆರ್., ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವ ಪ್ರಯತ್ನ ನಾರಾಯಣ ಗುರು ವಿಚಾರವೇದಿಕೆಯಿಂದ ಆಗಲಿದೆ. ಇವರು ಮೂವರು ಗೆದ್ದರೆ ಸಮಾಜಕ್ಕೆ ದೊಡ್ಡ ಶಕ್ತಿ ಸಿಗಲಿದೆ. ಉಳಿದ ಸಮಾಜಗಳಂತೆ ನಮ್ಮ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ ಆಗಲಿದೆ. ಆ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿಯೂ ತಾನೂ ಪ್ರಚಾರ ಕಾರ್ಯ ನಡೆಸುವುದಾಗಿ ಘೋಷಿಸಿದರು.
ಕೋಟ ಶ್ರೀನಿವಾಸರಿಗೆ ಈ ಬಾರಿ ಬಿಜೆಪಿ ಟಿಕೆಟ್‌ನಿಂದ ಲಾಭಕ್ಕಿಂತ ನಷ್ಟವೇ ಆಗಿದೆ. ಕೊಠರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಸಂತೋಷವಿದೆ. ಆದರೆ ವಿಧಾನ ಪರಿಷತ್ ಸದಸ್ಯರಾಗಿದ್ದವರು ಅವರು. ಆ ಸ್ಥಾನಮಾನ ಹೋರಾಟದ ಮೂಲಕ ಪಡೆಯಬಹುದು. ವಿಧಾನ ಪರಿಷತ್‌ನ ವಿಪಕ್ಷ ನಾಯಕನ ಹುದ್ದೆಯಲ್ಲಿದ್ದರು. ಮುಖ್ಯಮಂತ್ರಿಯ ಬಳಿಕ ದೊರಕುವ ಸ್ಥಾನಮಾನ ಅದು. ಅದು ಮತ್ತೆ ಈ ಸಮಾಜಕ್ಕೆ ಸಿಗಲು ಸಾಧ್ಯವೇ? ಬಿಜೆಪಿಗೆ ಬಿಲ್ಲವ ಸಮಾಜಕ್ಕೆ ನ್ಯಾಯ ಕೊಡಬೇಕೆಂದಿದ್ದರೆ, ಉಡುಪಿ- ಚಿಕ್ಕಮಗಳೂರಿನಲ್ಲಿ ಜಿ.ಪಂ. ಅಧ್ಯಕ್ಷರಾಗಿ ಪ್ರಾಮಾಣಿಕವಾಗಿ ನಿರ್ವಹಣೆ ಮಾಡಿದ ಬಿ.ಎಲ್. ಶಂಕರ ಪೂಜಾರಿ ಅಥವಾ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಿರಣ್ ಕುಮಾರ್, ರಾಜಪ್ಪ ಅವರಿದ್ದರು. ಅವರಿಗೆ ನೀಡಬಹುದಿತ್ತಲ್ಲವೇ? ಸತ್ಯಜಿತ್ ನೇರವಾಗಿ ಮಾತನಾಡುತ್ತಾನೆ ಅದಕ್ಕಾಗಿ ಕೊಡಲಿಲ್ಲ ಬಿಡಿ. ಕೋಟ ಅವರು ನಾನು ಯಾವ ಮಾನಸಿಕತೆ ಬಗ್ಗೆ ಮಾತನಾಡಿದೆ, ಹಾಗೆ ಇದ್ದವರು. ಅದೇ ಕಾರಣಕ್ಕೆ ಅವರಿಗೆ ನೀಡಲಾಗಿದೆ. ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಿಸಿ ಎರಡು ಸ್ಥಾನವನ್ನು ಸಮಾಜ ಕಳೆದುಕೊಳ್ಳುವಂತೆ ಮಾಡಲಾಗಿದೆ. ಲಾಭಕ್ಕಿಂತ ಹೆಚ್ಚು ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಸತ್ಯಜಿತ್ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಬಂಟ ಆಗುತ್ತಿದ್ದರೆ ನನಗು ಚುನಾವಣಾ ನಿಲ್ಲಲು ಅವಕಾಶ ಸಿಗುತ್ತಿತ್ತೋ ಏನೋ? ಆದರೆ ನಾನು ಹುಟ್ಟಿದ್ದು, ಶೂದ್ರ ಸಮಾಜದಲ್ಲಿ. ಹಾಗಾಗಿ ಶೂದ್ರ ಸಮಾಜದ ಎಂದರೆ ಕೇವಲ ಸೇವೆ ಮಾಡಲು, ಗುಲಾಮಗಿರಿಗೆ ಮಾತ್ರ ಎಂದು ಗೊತ್ತಿರಲಿಲ್ಲ ಎಂದವರು ಹೇಳಿದರು.
ಎಸ್‌ಎನ್‌ಜಿವಿಯ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಹೂಗಾರ್, ಉಪಾಧ್ಯಕ್ಷ ಕೆ.ಪಿ. ಲಿಂಗೇಶ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ ಎಂ. ಅಮೀನ್, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ್ ಕೋಟೆ, ಮಂಗಳೂರು ಘಟಕದ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.