ಆರ್​​ಎಸ್​ಎಸ್ ಸಮವಸ್ತ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿ ಎಲ್ಲರ ಗಮನಸೆಳೆದ ಬಿಜೆಪಿ ಕಾರ್ಯಕರ್ತ!

ಆರ್​​ಎಸ್​ಎಸ್ ಸಮವಸ್ತ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿ ಎಲ್ಲರ ಗಮನಸೆಳೆದ ಬಿಜೆಪಿ ಕಾರ್ಯಕರ್ತ!

ಗದಗ: ಬಿಜೆಪಿ ಹಿರಿಯ ಕಾರ್ಯಕರ್ತನೋರ್ವ ಆರ್​​ಎಸ್​ಎಸ್ ಸಮವಸ್ತ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಿ ಎಲ್ಲರ ಗಮನಸೆಳೆದಿದ್ದಾರೆ.

ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಎನ್ನುವ ಆರ್​ಎಸ್​ಎಸ್​ ಸ್ವಯಂ ಸೇವಕ ಕಾಂಗ್ರೆಸ್​ ಸೇರ್ಪಡೆಯಾದರು.

30 ವರ್ಷದ ಆರ್​ಎಸ್​ಎಸ್ ಸಕ್ರಿಯ ಕಾರ್ಯಕರ್ತರಾಗಿರುವ ಬಾಣದ್ ಅವರು ಸಮವಸ್ತ್ರದಲ್ಲೇ ಕಾಂಗ್ರೆಸ್​​ ಶಾಲು ಹಾಕಿಸಿಕೊಂಡಿರುವುದು ವಿಶೇಷವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಸಂಘದ ಸಮವಸ್ತ್ರದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ನಿಂಗಬಸಪ್ಪ ಬಾಣದ್ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಬಂದಿದ್ದನ್ನು ಕಂಡು ಸ್ಥಳದಲ್ಲಿದ್ದ ಜನರು ಆಶ್ಚರ್ಯಚಕಿತರಾದರು. ಇದೀಗ ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಗಲಕೋಟೆ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರದ ಅಂಗವಾಗಿ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿವ ಶಿವಾನಂದ ಪಾಟೀಲ, ಪುತ್ರಿ ಸಂಯುಕ್ತಾ ಪಾಟೀಲ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಬಿ.ಆರ್.ಯಾವಗಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ನಿಂಗಬಸಪ್ಪ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ನಿಂಗಬಸಪ್ಪ ಅವರು ಧರಿಸಿದ್ದ ಆರ್‌ಎಸ್‌ಎಸ್ ಕ್ಯಾಪ್ ನ್ನು ತೆಗೆದು ಕಾಂಗ್ರೆಸ್‌ನ ಬಿಳಿ ಟೋಪಿ ಹಾಕಿದರು.

ಜನರ ಗಮನ ಸೆಳೆಯಲು ನಿಂಗಬಸಪ್ಪ ಆರ್‌ಎಸ್‌ಎಸ್‌ ಸಮವಸ್ತ್ರ ಧರಿಸಿ ಕಾಂಗ್ರೆಸ್‌ ಸೇರಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article