ಗಂಗೊಳ್ಳಿಯ‌ ಬಟ್ಟೆ ಅಂಗಡಿಯಲ್ಲಿ ಕಳವು; ಇಬ್ಬರು ಅಪ್ರಾಪ್ತರು ಸಹಿತ ಐವರ ಬಂಧನ

ಗಂಗೊಳ್ಳಿಯ‌ ಬಟ್ಟೆ ಅಂಗಡಿಯಲ್ಲಿ ಕಳವು; ಇಬ್ಬರು ಅಪ್ರಾಪ್ತರು ಸಹಿತ ಐವರ ಬಂಧನ

ಕುಂದಾಪುರ: ಎರಡು ದಿನಗಳ‌ ಹಿಂದೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ‌ ಜಾಮೀಯಾ ಕಾಂಪ್ಲೆಕ್ಸ್ ನಲ್ಲಿರುವ‌ ಬಟ್ಟೆ ಅಂಗಡಿಯೊಂದರಲ್ಲಿ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸಹಿತ ಐವರು ಆರೋಪಿಗಳನ್ನು ಗಂಗೊಳ್ಳಿ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾ ನಿವಾಸಿ ನದೀಮ್ (27), ಗಂಗೊಳ್ಳಿಯ ಜಾಮೀಯಾ ಮೊಹಲ್ಲಾ ನಿವಾಸಿ ಮೊಹಮ್ಮದ್ ಆರೀಫ್(18), ಭಟ್ಕಳದ ಚೌಥನಿ ರಸ್ತೆ ಸಮೀಪದ ನಿವಾಸಿ ಮೊಹಮ್ಮದ್ ರಯ್ಯಾನ್ (18) ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾದ ಇಬ್ಬರು ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಕಾನೂನು ಸಂಘರ್ಷಕ್ಕೊಳಪಡಿಸಲಾಗಿದೆ.

ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್ ನಲ್ಲಿ ಎಮ್.ಎಮ್ ಕಲೆಕ್ಷನ್ ಬಟ್ಟೆ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿ ಹೊಂದಿರುವ ಗಂಗೊಳ್ಳಿಯ ಜೆ.ಎಮ್ ರೋಡ್ ನಿವಾಸಿ ರಿಜ್ವಾನ್ ಮಾರ್ಚ್ 31 ರ ಸಂಜೆ ತಮ್ಮ ಅಂಗಡಿಯ ಸಿಬ್ಬಂದಿಗಳೊಂದಿಗೆ ಮಸೀದಿಗೆ ಪ್ರಾರ್ಥನೆಗಾಗಿ ತೆರಳಿದ್ದರು. ಇದೇ ಸಮಯದಲ್ಲಿ ಅಂಗಡಿಯ ಬಾಗಿಲು ತೆರೆದು ಒಳ ಪ್ರವೇಶಿಸಿದ ಆರೋಪಿಗಳು ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ 90,000 ನಗದು ಹಾಗೂ ಮೊಬೈಲ್‌ ಫೋನ್ ಕಳವುಗೈದು ಪರಾರಿಯಾಗಿದ್ದರು. ರಿಜ್ವಾನ್ ಹಾಗೂ ಸಿಬ್ಬಂದಿಗಳು ಪ್ರಾರ್ಥನೆ ಮುಗಿಸಿ ಅಂಗಡಿಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.‌ ಅಂಗಡಿಯೊಳಗಿನ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸರ ತಂಡ ಕಳ್ಳತನ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಆರೋಪಿಗಳಿಂದ ಮೊಬೈಲ್ ಫೋನ್, 52,000 ರೂ. ನಗದು ಹಾಗೂ 1ಬೈಕ್, 1ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article