ಸಾವು ಗೆದ್ದು ಬಂದ 2 ವರ್ಷದ ಬಾಲಕ: ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ರಕ್ಷಣೆ; ಸತತ 20 ಗಂಟೆ ನಿರಂತರ ಕಾರ್ಯಾಚರಣೆ

ಸಾವು ಗೆದ್ದು ಬಂದ 2 ವರ್ಷದ ಬಾಲಕ: ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ರಕ್ಷಣೆ; ಸತತ 20 ಗಂಟೆ ನಿರಂತರ ಕಾರ್ಯಾಚರಣೆ

ವಿಜಯಪುರ: ಇಲ್ಲಿನ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 2ವರ್ಷದ ಬಾಲಕ ಸಾತ್ವಿಕ್ ನನ್ನು ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮನೆ ಬಳಿ ಆಟವಾಡುತ್ತಿದ್ದ 2 ವರ್ಷದ ಮಗು ಸಾತ್ವಿಕ್ ಆಕಸ್ಮಿಕವಾಗಿ ಸುಮಾರು 16 ಅಡಿಯ ಕೊಳವೆ ಬಾವಿಗೆ ಬಿದ್ದಿದ್ದ. ನಿನ್ನೆ ಸಂಜೆಯಿಂದ ಮಗು ರಕ್ಷಣೆಗಾಗಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಮಗುವನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.

ಎರಡು ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಬಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿತ್ತು. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.‌ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬಾಲಕನ ಅಳುವುದು ಕೇಳಿಸಿತು. ಮಧ್ಯಾಹ್ನ 1.44ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ.

ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ ಬಾಲಕನು ಬುಧವಾರ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ. ಸಂಜೆ 5.30ರ ಸುಮಾರಿಗೆ ಆತ ಕೊಳವೆಬಾವಿಗೆ ಬಿದ್ದಿದ್ದ. ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾತ್ವಿಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿತ್ತು. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದ್ದರು. ಬಾಲಕನ ತಂದೆ-ತಾಯಿಯಂತೂ ರಾತ್ರಿಯಿಡೀ ಕೊಳವೆಬಾವಿ ಪಕ್ಕದಲ್ಲೇ ಇದ್ದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

Ads on article

Advertise in articles 1

advertising articles 2

Advertise under the article