ಬಿಜೆಪಿ-ಜೆಡಿಎಸ್ ನನ್ನ ದೇಹದ ಎರಡು ಕಣ್ಣುಗಳು ಇದ್ದಂತೆ, ನನ್ನ ಹೃದಯ ಬೆಂಗಳೂರು ಗ್ರಾಮಾಂತರದಲ್ಲಿದೆ: ಎಚ್.ಡಿ ಕುಮಾರಸ್ವಾಮಿ
ರಾಮನಗರ: ಬಿಜೆಪಿ ಹಾಗೂ ಜೆಡಿಎಸ್ ದೇಹದ ಎರಡು ಕಣ್ಣುಗಳು ಇದ್ದಂತೆ, ನನ್ನ ದೇಹ 28 ಕ್ಷೇತ್ರದಲ್ಲಿದ್ದರೂ, ನನ್ನ ಹೃದಯ ಬೆಂಗಳೂರು ಗ್ರಾಮಾಂತರದಲ್ಲಿ ಇರಲಿದೆ. ನಾನು ರಾಮನಗರ ಜಿಲ್ಲೆಯನ್ನ ಎಂದಿಗೂ ಬಿಡಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಧರ್ಮಯುದ್ಧ ನಡೆಯುತ್ತಿದೆ. ಇಲ್ಲಿಯ ಅಧರ್ಮದ ರಾಜಕಾರಣಕ್ಕೆ ಉತ್ತರ ಕೊಡಲು ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಜುನಾಥ್ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕಾರಣಕ್ಕೆ ಅಮಿತ್ ಶಾ ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಒಂದೇ ದೇಹದ ಎರಡು ಕಣ್ಣುಗಳಿದ್ದ ಹಾಗೆ. ಕಳೆದ ಎರಡು ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದೀರಿ. ಇಡೀ ರಾಜ್ಯದಲ್ಲಿ ನಾನು ಚುನಾವಣೆಗೆ ಕೆಲಸ ಮಾಡ್ತಾ ಇದ್ದೀನಿ. ನನ್ನ ಹೃದಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿದೆ. ನಾನು ರಾಮನಗರ ಬಿಟ್ಟು ಹೋಗಲ್ಲ. ಇವತ್ತು ಅನಿವಾರ್ಯವಾಗಿ ಬಿಜೆಪಿ ಜೊತೆ ಅಭಿವೃದ್ಧಿಗಾಗಿ ಕೈ ಜೋಡಿಸಿದ್ದೇವೆ. ದಯಮಾಡಿ ನನ್ನ ಚನ್ನಪಟ್ಟಣದ ಜನರು ಕ್ಷಮಿಸಬೇಕು ಎಂದಿದ್ದಾರೆ.
ಏ.4ಕ್ಕೆ ನಾನು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿ ಬಳಿಕ ಇಲ್ಲಿಗೆ ಬರುತ್ತೇನೆ. ಅಂದು ಮಂಜುನಾಥ್ ಅವರು ನಾಮಪತ್ರ ಸಲ್ಲಿಸುತ್ತಾರೆ. ಅಂದು ಎಲ್ಲಾ ವಿಚಾರವನ್ನು ಪ್ರಸ್ತಾಪ ಮಾಡಲಿದ್ದೇನೆ. ದೇಶದ ಜನರು ಮೋದಿಯವರನ್ನು ಬೆಂಬಲಿಸಿದ್ದಾರೆ. ರಾಜ್ಯದಲ್ಲಿ 28 ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ಚನ್ನಪಟ್ಟಣ ಗಂಡು ಮೆಟ್ಟಿದ ನೆಲ. ಇಲ್ಲಿ ಅಮಿತ್ ಶಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಜನರಿಗೆ ಆಮೀಷ ತೋರಿಸುತ್ತಿದ್ದಾರೆ. ಸೀರೆ, ಕುಕ್ಕರ್‍ನ್ನು ಜನರಿಗೆ ನೀಡ್ತಾ ಇದ್ದಾರೆ. ಜನರಿಗಾಗಿ ಮಿಡಿಯುವ ಮಂಜುನಾಥ್ ಅವರನ್ನು ಗೆಲ್ಲಿಸಿ ಉತ್ತರ ಕೊಡಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜೊತೆ ಸೇರಿ ಜೆಡಿಎಸ್ ಸತ್ತು ಹೋಗಿದೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. ಹಾಗೆ ಹೇಳುವವರಿಗೆ ಜೆಡಿಎಸ್ ಬದುಕಿಯೋ? ಸತ್ತಿದೆಯೋ ಎಂದು ಅವರಿಗೆ ಚನ್ನಪಟ್ಟಣದ ಜನ ಉತ್ತರ ಕೊಟ್ಟಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿರವರ ಕೈಬಲಪಡಿಸಬೇಕು. ಹೀಗಾಗಿ 28 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಗಂಡುಮೆಟ್ಟಿದ ನಾಡು. ಇಲ್ಲಿಂದ ಅಮಿತ್ ಶಾ ಅವರು ಸಂದೇಶ ನೀಡಿದ್ದಾರೆ ಎಂದರು.