ಮೋದಿಗೆ ಪರ್ಯಾಯ ನಾಯಕ ಯಾರು ? ಕಾಂಗ್ರೆಸ್ ನಾಯಕ ಶಶಿ ತರೂರ್ ಕೊಟ್ಟ ಉತ್ತರವೇನು ನೋಡಿ...

ಮೋದಿಗೆ ಪರ್ಯಾಯ ನಾಯಕ ಯಾರು ? ಕಾಂಗ್ರೆಸ್ ನಾಯಕ ಶಶಿ ತರೂರ್ ಕೊಟ್ಟ ಉತ್ತರವೇನು ನೋಡಿ...

ಹೊಸದಿಲ್ಲಿ: ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬದು ಅಪ್ರಸ್ತುತ. ಅದರಲ್ಲೂ ನಮ್ಮದು ಪಕ್ಷಗಳ ಒಕ್ಕೂಟವಾಗಿರುವುದರಿಂದ ನಾವು ಯಾರೋ ಒಬ್ಬರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರು ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಬೆಳಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪತ್ರಕರ್ತನೊಬ್ಬನ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿರುವುದಾಗಿ ತಿಳಿಸಿದ್ದಾರೆ.

ಪತ್ರಕರ್ತನೊಬ್ಬ ಮತ್ತೆ ನನಗೆ, ನಿಮ್ಮಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನನ್ನಾಗಿ ಯಾರನ್ನು ಹೆಸರಿಸುತ್ತೀರಿ ಎಂಬ ಅದೇ ಹಳೇ ಪ್ರಶ್ನೆಯನ್ನು ಕೇಳಿದ. ಆದರೆ ಸಂಸದೀಯ ವ್ಯವಸ್ಥೆಯಲ್ಲಿ ಈ ಪ್ರಶ್ನೆಯೇ ಅಪ್ರಸ್ತುತ. ನಾವು ಅಧ್ಯಕ್ಷೀಯ ಚುನಾವಣಾ ವ್ಯವಸ್ಥೆಯಲ್ಲಿರುವಂತೆ ಯಾರೋ ಒಬ್ಬರನ್ನು ಚುನಾಯಿಸುತ್ತಿಲ್ಲ. ನಮ್ಮದು ಒಂದು ಸಮೂಹ ತತ್ವ ಮತ್ತು ನಂಬಿಕೆಗಳನ್ನು ಪ್ರತಿನಿಧಿಸುವ, ಭಾರತದ ವಿವಿಧತೆ, ಬಹುತ್ವ ಮತ್ತು ಆಂತರಿಕ ಬೆಳವಣಿಗೆಯ ಮೌಲ್ಯಗಳ ರಕ್ಷಣೆಗೆ ಬದ್ಧವಾಗಿರುವ ಪಕ್ಷ ಅಥವಾ ಪಕ್ಷಗಳ ಒಕ್ಕೂಟವಾಗಿದೆ.

ಭಾರತದ ಜನರ ಸಮಸ್ಯೆಗಳಿಗೆ ಸಂದಿಸುವ ಮತ್ತು ವೈಯಕ್ತಿಕ ಅಹಂ ತೊರೆದ ನಮ್ಮ ಅನುಭವೀ, ಸಮರ್ಥ ಮತ್ತು ವಿವಿಧ ಭಾರತೀಯ ನಾಯಕರ ದೊಡ್ಡ ಗುಂಪು ಮೋದಿಗೆ ಪರ್ಯಾಯ ಎಂದು ಹೇಳಬಹುದು. ಅವರಲ್ಲಿ ನಿರ್ದಿಷ್ಟವಾಗಿ ಯಾರು ಎಂಬುದು ನಂತರದ ಪ್ರಶ್ನೆ. ನಮ್ಮ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ರಕ್ಷಣೆಯೇ ಮುಖ್ಯ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ನ ಪ್ರಭಾವಿ ಮುಖಂಡರಾಗಿರುವ ಮಾಜಿ ಸಚಿವ ಶಶಿ ತರೂರ್ ಅವರು ತಮ್ಮ ಪ್ರಖರ ಮಾತುಗಳಿಗೆ ಇಡೀ ದೇಶದಲ್ಲಿ ಹೆಸರುವಾಸಿ. ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿರುವ ಅವರು ಇದೀಗ ಅದೇ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷಗೆ ಮುಂದಾಗಿದ್ದಾರೆ. ಅವರು ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ರಾಜ್ಯ ದರ್ಜೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಈ ಬಾರಿ ಅವರ ಮುಂದೆ ಕಣದಲ್ಲಿರುವುದು ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್. ಇನ್ನು ಎಡರಂಗದಿಂದ ಪನ್ಯಾನ್ ರವೀಂದ್ರನ್ ಕಣದಲ್ಲಿದ್ದಾರೆ. ಕಳೆದ ಎರಡು ವಾರದಿಂದ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಂಚರಿಸುತ್ತಿರುವ ಶಶಿ ತರೂರ್ ಅವರು ಭರದಿಂದ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಅವರ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೂಲತಃ ಕೇರಳದವರು. ಅವರು 2006ರಿಂದ 2018ರವೆರಗೂ ಕರ್ನಾಟಕದಿಂದ ಪಕ್ಷೇತರರಾಗಿ ರಾಜ್ಯ ಸಭಾಗೆ ಆಯ್ಕೆಯಾಗಿದ್ದರು. 2018ರಲ್ಲಿ ಬಿಜೆಪಿ ಸೇರಿದ ಅವರು ಮತ್ತೆ ರಾಜ್ಯಸಭೆಗೆ ಕರ್ನಾಟಕದಿಂದ ಚುನಾಯಿತರಾದರು. 2019ರಿಂದ ಮೋದಿ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಇದೀಗ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದು ಈ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಏಪ್ರಿಲ್ 26ರಂದು ಕೇರಳದಲ್ಲಿ ಮತದಾನ ನಡೆಯಲಿದೆ.

Ads on article

Advertise in articles 1

advertising articles 2

Advertise under the article