ಪ್ರಜ್ವಲ್ ರೇವಣ್ಣ ಪ್ರಕರಣ: ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ; ಸರ್ಕಾರದ ತನಿಖೆಯಿಂದ ವಾಸ್ತವಾಂಶ ಹೊರಬರಲಿ: ಹೆಚ್ ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ಪ್ರಕರಣ: ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ; ಸರ್ಕಾರದ ತನಿಖೆಯಿಂದ ವಾಸ್ತವಾಂಶ ಹೊರಬರಲಿ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಭಾರೀ ಸದ್ದು ಮಾಡುತ್ತಿದೆ. ಸರ್ಕಾರ ಈಗಾಗಲೇ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಜೆಡಿಎಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದ್ದರೆ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಶಿಕ್ಷೆಯಾಗುತ್ತದೆ, ಸರ್ಕಾರ ತನಿಖೆಗೆ ವಹಿಸಿದೆ, ತನಿಖೆಯಾಗಿ ವಾಸ್ತವಾಂಶ ಹೊರಬರಲಿ ಎಂದರು.

ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತೇವೆ: ನಾನಾಗಲಿ ದೇವೇಗೌಡರಾಗಲಿ ಯಾವತ್ತಿಗೂ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಯಾರಾದರೂ ಕಷ್ಟ ಹೇಳಿಕೊಂಡು ಬಂದರೆ ಅವರ ಕಷ್ಟ ಪರಿಹರಿಸಿ ಕಳುಹಿಸಿದ್ದೇವೆ. ನಾವಂತೂ ನಮ್ಮ ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಗೌರವ ನೀಡಿಕೊಂಡು ಬಂದಿದ್ದೇವೆ ಎಂದರು.

ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಗೆ ಈಗಾಗಲೇ ರಾಜ್ಯ ಸರ್ಕಾರ ಆದೇಶ ಮಾಡಿದೆ. ತನಿಖೆ ನಡೆಯಲಿ. ಎಸ್‌ಐಟಿ ತನಿಖೆಯಿಂದ ವಾಸ್ತವಾಂಶ ಹೊರಗೆ ಬರಲಿ. ಈ ನೆಲದ ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವಂತೂ ಯಾವುದಕ್ಕೂ ತಪ್ಪು ಮಾಡಿದ ವಿಷಯದಲ್ಲಿ ಯಾರಿಗೂ ಕ್ಷಮಿಸುವ ಪ್ರಶ್ನೆಯಿಲ್ಲ. ತನಿಖೆಯ ವರದಿ ಸಂಪೂರ್ಣ ಹೊರಗೆ ಬರಲಿ. ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

ಇನ್ನು ವಿಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅದು ನನಗೆ ಸಂಬಂಧ ಪಟ್ಟಿಲ್ಲ. ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿದ್ದಾರೆ. ಅವರು ವಿದೇಶಕ್ಕೆ ಹೋಗಿದ್ದರೂ ಕರೆದುಕೊಂಡು ಬರುವ ಜವಾಬ್ದಾರಿ ಅವರದ್ದು. ಅವರು ಕರೆದುಕೊಂಡು ಬರುತ್ತಾರೆ. ವಿಚಾರಣೆ ನಡೆಸುತ್ತಾರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು.

Ads on article

Advertise in articles 1

advertising articles 2

Advertise under the article