ಪ್ರಲ್ಹಾದ್ ಜೋಶಿಗೆ ಮುಳುವಾದ ದಿಂಗಾಲೇಶ್ವರ ಸ್ವಾಮಿ; ಬಿಜೆಪಿಗೆ ಕೈಕೊಡಲಿದೆಯೇ ಲಿಂಗಾಯತ ಸಮುದಾಯ!
ಬೆಂಗಳೂರು: ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿದ್ದು, ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕಣಕ್ಕಿಳಿಸಿದರೆ ಸೋಲಿಸುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ.
ಶಿರಹಟ್ಟಿ ಫಕೀರೇಶ್ವರ ಮಠದ ಮಠಾಧೀಶರಾದ ದಿಂಗಾಲೇಶ್ವರ ಸ್ವಾಮಿಗಳು ಏಪ್ರಿಲ್ 2 ರಂದು ಮಠಾಧೀಶರ ಸಭೆ ಕರೆದಿದ್ದಾರೆ. ಅವರ ಅಭಿಪ್ರಾಯ ಪಡೆಯಲು ಸ್ವಾಮೀಜಿಗಳ ಸಭೆ ನಡೆಸಲಾಗಿದ್ದು, ಈಗ ಭಕ್ತರ ಸಭೆಯನ್ನು ಕರೆಯಲಾಗುತ್ತಿದೆ, ಅಂತಿಮ ನಿರ್ಧಾರ ಕೈಗೊಳ್ಳಲು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಅವರು ದೂರವಾಣಿ ಮೂಲಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮಿ ಬಹಿರಂಗವಾಗಿಯೇ ಹೇಳಿದ್ದು, ಧಾರವಾಡ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಕರೆ ನೀಡಿದ್ದಾರೆ.
ನಾನು ಸ್ವಂತವಾಗಿ ಮಾತನಾಡುತ್ತಿಲ್ಲ, ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೆನೆ. ಅವರ ಆಡಳಿತ ವಿನಾಶಕಾರಿಯಾಗಿದೆ. ತಮ್ಮ ನಿಲುವು ಬದಲಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಬಲ ಲಿಂಗಾಯತ ಪಂಚಮಸಾಲಿಗಳು, ಲಿಂಗಾಯತ ನೊಳಂಬ ಸಮುದಾಯ ಮತ್ತು ಲಿಂಗಾಯತ ಬನಿಜ ಸಮುದಾಯದಂತಹ ಇತರ ಲಿಂಗಾಯತ ಸಮುದಾಯದ ಮುಖಂಡರು ಸರಿಯಾದ ಪ್ರಾತಿನಿಧ್ಯ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮತ್ತು ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳದ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮಿ ರೊಚ್ಚಿಗೆದ್ದಿದ್ದಾರೆ.
ವೀರಶೈವ ಮಹಾಸಭಾ, ಧಾರವಾಡ ಘಟಕವು ಸ್ವಾಮೀಜಿಗೆ ಬೆಂಬಲ ನೀಡುವುದಾಗಿ ಹೇಳಿದ್ದು, ರಾಜ್ಯ ಘಟಕ ನೀಡುವ ಕರೆಗೆ ಬೆಂಬಲ ನೀಡುವುದಾಗಿ ಅಖಿಲ ಭಾರತ ವೀರಶೈವ ಸಮಾಜದ ಕಾರ್ಯದರ್ಶಿ ರೇಣುಕಾ ಪ್ರಸನ್ನ ತಿಳಿಸಿದ್ದಾರೆ. ಜೋಶಿ ಅವರ ಕ್ಷೇತ್ರದಲ್ಲಿ 6.5 ರಿಂದ 7 ಲಕ್ಷ ಲಿಂಗಾಯತರು ಇರುವುದರಿಂದ ಇದು ಅವರಿಗೆ ತೊಂದರೆಯಾಗುವ ಸಾಧ್ಯತೆಯಿದೆ.