ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ; ಅವನಿಗೆ ತಕ್ಕ ಶಿಕ್ಷೆ ಆಗಲೇಬೇಕು: ಫಯಾಜ್ ತಾಯಿ ಕಣ್ಣೀರು
ಧಾರವಾಡ: ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ನೇಹಾಳ ತಂದೆ - ತಾಯಿಗೂ ನಾನು ಕ್ಷಮೆ ಕೇಳುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂಗೆ, ನನ್ನ ಮಗ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಗನ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದು, ನೇಹಾಳ ತಂದೆ-ತಾಯಿಯವರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂತೆ. ನೇಹಾ ಬೇರೆಯಲ್ಲ, ನನ್ನ ಮಗಳು ಬೇರೆಯಲ್ಲ. ನೇಹಾ ತಂದೆ-ತಾಯಿಗೆ ಆಗಿರುವಷ್ಟೇ ದುಃಖ ಆಗಿದೆ ಎಂದು ಅಳಲು ತೋಡಿಕೊಂಡರು.
ನನ್ನ ಮಗ ಮಾಡಿರುವುದು ತಪ್ಪು. ಯಾವ ಮಕ್ಕಳು ಮಾಡಿದರು ತಪ್ಪು ತಪ್ಪೇ. ಈ ನೆಲದ ಕಾನೂನು ಏನು ಹೇಳುತ್ತೋ ಅದರ ಪ್ರಕಾರವೇ ಶಿಕ್ಷೆ ಆಗಲಿ ಎಂದು ಹೇಳಿದರು.
ನನ್ನ ಮಗನನ್ನ ಐಎಎಸ್ ಅಧಿಕಾರಿ ಮಾಡುವ ಆಸೆ ಇತ್ತು. ತುಂಬಾ ಬುದ್ಧಿವಂತ ಇದ್ದ. ಎಲ್‌ಕೆಜಿ, ಯುಕೆಜಿ ಯಿಂದ 90% ಜಾಸ್ತಿ ಮಾರ್ಕ್ಸ್ ತೆಗೆಯುತ್ತಿದ್ದ ಎಂದು ಮಗನ ಬಗ್ಗೆ ಹೇಳಿಕೊಂಡರು.
ಅವನು ತಪ್ಪು ಮಾಡಿದ್ದಾನೆ. ಶಿಕ್ಷೆ ಆಗಲೇಬೇಕು. ನಾನು ಕೂಡ ನೂರಾರು ಮಕ್ಕಳಿಗೆ ಶಿಕ್ಷೆ ಕೊಟ್ಟಿದ್ದೇನೆ. ಈಗ ನನ್ನ ಮಗ ತಪ್ಪು ಮಾಡಿದ್ದಾನೆ ಅಂದ್ಮೇಲೆ ಶಿಕ್ಷೆ ಆಗಬೇಕು. ಶಿಕ್ಷೆಯನ್ನು ಅವನು ಅನುಭವಿಸಲಿ. ಮಗನ ತಪ್ಪಿಗೆ ನಾವು ತಲೆ ತಗ್ಗಿಸುವಂತಾಗಿದೆ ಎಂದು ಕಣ್ಣೀರಿಟ್ಟರು.