ಬಿಜೆಪಿ 150ಕ್ಕಿಂತ ಒಂದೇ ಒಂದು ಸ್ಥಾನ ಸಹ ಹೆಚ್ಚು ಪಡೆಯುವುದಿಲ್ಲ: ರಾಹುಲ್ ಗಾಂಧಿ
ಭಾಗಲ್ಪುರ್: ಕೇಂದ್ರದ ಆಡಳಿತಾರೂಢ ಬಿಜೆಪಿ ಸಂವಿಧಾನ "ಬದಲಿಸಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಸಂವಿಧಾನ ಬದಲಿಸುವ ಯತ್ನವನ್ನು ವಿಫಲಗೊಳಿಸುತ್ತದೆ ಎಂದು ಶನಿವಾರ ಹೇಳಿದ್ದಾರೆ.
ಇಂದು ಬಿಹಾರದ ಭಾಗಲ್ಪುರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ 370 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಹೇಳಿಕೆಗೆ ವ್ಯಂಗ್ಯವಾಡಿದರು. "ಅವರ ಸಂಖ್ಯೆ 150 ದಾಟುವುದಿಲ್ಲ" ಎಂದು ಪ್ರತಿಪಾದಿಸಿದರು.
"ಈ ಬಿಜೆಪಿಯವರು 370ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ 150 ಕ್ಕಿಂತ ಒಂದೇ ಒಂದು ಸ್ಥಾನ ಸಹ ಹೆಚ್ಚು ಪಡೆಯುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ" ಎಂದಿದ್ದಾರೆ.
"ಇಂಡಿಯಾ ಮೈತ್ರಿಕೂಟ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುತ್ತಿದೆ ಮತ್ತು ಬಿಜೆಪಿ-ಆರ್‌ಎಸ್‌ಎಸ್ ಒಟ್ಟಾಗಿ ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿವೆ" ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರೋಪಿಸಿದರು.
‘ದೇಶದ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಏನೆಲ್ಲ ಸಿಕ್ಕಿದೆಯೋ ಅದಕ್ಕೆ ಸಂವಿಧಾನವೇ ಕಾರಣ. ಸಂವಿಧಾನವನ್ನು ಬದಲಿಸಿದರೆ ಎಲ್ಲವೂ ಅಂತ್ಯವಾಗುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.