ಬಾಲ್ಯವಿವಾಹದಿಂದ ತಪ್ಪಿಸಿಕೊಂಡಿದ್ದ ಬಾಲಕಿ BIE ಪರೀಕ್ಷೆಯಲ್ಲಿ ದೇಶಕ್ಕೆ ಟಾಪರ್!
ಅಮರಾವತಿ: ಒಂದು ಕಾಲದಲ್ಲಿ ಹುಡುಗಿಯರನ್ನು ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿತ್ತು. ಈ ಪರಿಸ್ಥಿತಿಗಳಲ್ಲಿ ಕ್ರಮೇಣ ಬದಲಾವಣೆಗಳು ಬರುತ್ತಿವೆ. ಹುಡುಗರಿಗೆ ಸರಿಸಮಾನವಾಗಿ ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಆದರೆ, ಸಾಕಷ್ಟು ಬಡ ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ತಕ್ಕ ಮಟ್ಟದ ಶಿಕ್ಷಣ ನೀಡಿ ಮದುವೆ ಮಾಡಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವನೆ .ಇದೀಗಾ ಇದಕ್ಕೊಂದು ಉತ್ತಮ ನಿದರ್ಶನ ಎನ್ನುವಂತಹ ಘಟನೆ ಇಲ್ಲಿದೆ ನೋಡಿ. 2017ರಲ್ಲಿ ಬಾಲ್ಯವಿವಾಹದಿಂದ ತಪ್ಪಿಸಿಕೊಂಡು ಕುಟುಂಬದ ಸದಸ್ಯರ ಟೀಕೆ ಮಾತುಗಳಿಂದ ನೊಂದಿದ್ದ ಬಾಲಕಿ ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದು ದೇಶದ ಗಮನ ಸೆಳೆದಿದ್ದಾಳೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ಮಂಡಲದ ಪೆದ್ದಹರಿವನಂ ಗ್ರಾಮದ ನಿರ್ಮಲಾ ಎಂಬ ಬಾಲಕಿ ಇತ್ತೀಚಿಗಷ್ಟೇ ಆಂಧ್ರಪ್ರದೇಶದ ಪ್ರಥಮ ವರ್ಷದ ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ದೇಶದ ಗಮನ ಸೆಳೆದಿದ್ದಾಳೆ. 10ನೇ ತರಗತಿಯಲ್ಲಿ 537 ಅಂಕ ಪಡೆದಿದ್ದರೂ ಆಕೆಯ ಪೋಷಕರು ಬಾಲ್ಯವಿವಾಹ ಮಾಡಲು ನಿರ್ಧರಿಸಿದ್ದರು. ಮದುವೆಯಾಗಲು ಇಷ್ಟವಿಲ್ಲ ಎಂದಿದ್ದ ಬಾಲಕಿ, ಐಪಿಎಸ್ ಆಗುವುದೇ ನನ್ನ ಗುರಿ ಎಂದು ಹೇಳಿದ್ದಳು. ಇದರಿಂದ ಶಿಕ್ಷಣವನ್ನು ಮುಂದುವರಿಸಿದ್ದಳು.
ಶ್ರೀನಿವಾಸ್ ಮತ್ತು ಹನುಮಂತಮ್ಮ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಅವರ ಕಿರಿಯ ಮಗಳು ನಿರ್ಮಲಾ. ಉಳಿದ ಮೂವರು ಹುಡುಗಿಯರಿಗೆ ಮದುವೆಯಾಗಿದೆ. ನಿರ್ಮಲಾ ಕಲಿಕೆಯಲ್ಲಿ ಪ್ರತೀ ಬಾರಿ ತರಗತಿಗೆ ಟಾಪರ್ ಆಗಿದ್ದರೂ ಕೂಡ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಬಾಲ್ಯ ವಿವಾಹ ಮಾಡಿಸಲು ಮುಂದಾಗಿದ್ದರು. ಆದರೆ ಪಟ್ಟು ಬಿಡದೆ ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡು ಓದು ಮುಂದುವರಿಸಿದ್ದಾಳೆ.
ಆದೋನಿ ಶಾಸಕ ಸಾಯಿಪ್ರಸಾದ್ ರೆಡ್ಡಿ ಹಾಗೂ ಅಧಿಕಾರಿಗಳು ವರ್ಷಗಳಿಂದ ಹಿಂದೆ ಈ ಬಾಲಕಿಯನ್ನು ಭೇಟಿಯಾಗಿದ್ದು, ಆಕೆಯ ಶಿಕ್ಷಣ ಮುಂದುವರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸಿದ್ದರು. ಇದೀಗಾ ಕರ್ನೂಲ್ ಜಿಲ್ಲಾಧಿಕಾರಿ ಡಾ.ಸೃಜನಾ ಪ್ರತಿಕ್ರಿಯಿಸಿ, ಬಾಲ್ಯವಿವಾಹದಿಂದ ಪಾರಾದ ಬಾಲಕಿ ಇಂದು ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಅನನ್ಯ ಸಾಧನೆಗೈದು ದೇಶದ ಗಮನ ಸೆಳೆದಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ವಿದ್ಯಾರ್ಥಿ ನಿರ್ಮಲಾ ಓದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾಳೆ.