ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಸುಮಲತಾ ಅಂಬರೀಶ್; ಕ್ರಿಕೆಟಿಗ ದೊಡ್ಡ ಗಣೇಶ-ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬಿಜೆಪಿ ಸೇರ್ಪಡೆ

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಸುಮಲತಾ ಅಂಬರೀಶ್; ಕ್ರಿಕೆಟಿಗ ದೊಡ್ಡ ಗಣೇಶ-ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬಿಜೆಪಿ ಸೇರ್ಪಡೆ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿದ್ದ ಸುಮಲತಾ ಅಂಬರೀಶ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜೊತೆಗೆ ಕ್ರಿಕೆಟಿಗ ದೊಡ್ಡ ಗಣೇಶ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಕರ್ನಾಟಕ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆಯಾಗುವ ಮುನ್ನ ಅಂಬರೀಷ್ ಸಮಾದಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದರು, ಪತ್ರ ಅಭಿಷೇಕ್ ಅಂಬರೀಷ್ ಮತ್ತುನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಯಲ್ಲಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದ ಸುಮಲತಾ, ಬಿಜೆಪಿಗೆ ಸೇರುವುದಾಗಿ ಘೋಷಣೆ ಮಾಡಿದ್ದರು. ಬುಧವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ಅವರು, ಟಿಕೆಟ್ ಸಿಗದಿದ್ದರೆ ಹಲವು ರಾಜಕಾರಣಿಗಳು ಪಕ್ಷ ಬದಲಾಯಿಸುತ್ತಾರೆ. ಆದರೆ, ನಾನು ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು.

ಬಿಜೆಪಿ ಸೇರಿದ ನಂತರ ಮಾತನಾಡಿದ ಸುಮಲತಾ, ಬಿಜೆಪಿ ಸೇರ್ಪಡೆ ನನ್ನ ಉತ್ತಮ ಆಯ್ಕೆ ಎನಿಸಿತ್ತು, ಬೊಮ್ಮಾಯಿ ನನಗೆ 50 ಕೋಟಿ ರು. ಅನುದಾನ ನೀಡಿದ್ದರು, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನ ಪರ ಪ್ರತಾರ ಮಾಡಿದ್ದನ್ನು ಮರೆಯಲಾಗದು, ಮಂಡ್ಯ ಜಿಲ್ಲೆಗೆ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಬಿಜೆಪಿಗೆ ಸೇರಬೇಕು ಎಂದರು. ಬಿಜೆಪಿ ಸೇರ್ಪಡೆಗೂ ಮುನ್ನ ಸುಮಲತಾ ಅಂಬರೀಶ್​ ಅವರು, “ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದರು.

ಮಂಡ್ಯದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಿನ್ನಡೆ ಉಂಟು ಮಾಡಿದೆ. ಎನ್ ಡಿ ಎ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಸುಮಲತಾ 2019 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಸ್ವತಂತ್ರವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು, ಮಂಡ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.

Ads on article

Advertise in articles 1

advertising articles 2

Advertise under the article