ಮೋದಿ ಆಡಳಿತ ಶೈಲಿ ಬದಲಾವಣೆ, ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆ, ಉದ್ಯೋಗ ಸೃಷ್ಟಿ, ಜಾತಿ ಗಣತಿ, ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿ ಹಲವು ಭರವಸೆ ನೀಡಿದ ಕಾಂಗ್ರೆಸ್; 'ನ್ಯಾಯಪತ್ರ' ಪ್ರಣಾಳಿಕೆ ಬಿಡುಗಡೆ
ನವದೆಹಲಿ: ಮೋದಿ ಆಡಳಿತ ಶೈಲಿ ಬದಲಾವಣೆ, ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆ ವಿಶ್ವಾಸ ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ 'ನ್ಯಾಯ ಪತ್ರ'ವನ್ನು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಇಂದು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯನ್ನು 'ನ್ಯಾಯಪತ್ರ' ಎಂದು ಕರೆದಿದೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಚಿದಂಬರಂ ಹಾಗೂ ವೇಣುಗೋಪಾಲ್ ಉಪಸ್ಥಿತರಿದ್ದರು.
ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಕಳೆದೊಂದು ದಶಕದಲ್ಲಿನ ಮೋದಿ ಸರ್ಕಾರದ ಆಡಳಿತ ಶೈಲಿಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಪಣತೊಡಲಾಗಿದ್ದು, ಈ ಅವಕಾಶವನ್ನು ಹಾಲಿ ಸಾರ್ವತ್ರಿಕ ಚುನಾವಣೆ ನೀಡಿದೆ. ಧರ್ಮ, ಭಾಷೆ, ಜಾತಿಯನ್ನು ಮೀರಿ ನೋಡಲು ಜನರಿಗೆ ಮನವಿ ಮಾಡಲಾಗಿದ್ದು, ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಿ ಎಂದು ಕಾಂಗ್ರೆಸ್ ಮತದಾರರಿಗೆ ಮನವಿ ಮಾಡಿದೆ.
ಅಂತೆಯೇ ಕಾಂಗ್ರೆಸ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಿದ್ದು, SC, ST ಮತ್ತು OBC ಗಳಿಗೆ ಮೀಸಲಾತಿಯಲ್ಲಿ 50 ಪ್ರತಿಶತ ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಇನ್ನು ಉದ್ಯೋಗಗಳಲ್ಲಿ ಶೇಕಡಾ ಹತ್ತರಷ್ಟು ಕೋಟಾ, EWS ಗಾಗಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಜಾತಿಗಳು, ಸಮುದಾಯಗಳಿಗೆ ತಾರತಮ್ಯವಿಲ್ಲದೆ ಜಾರಿಗೆ ತರಲಾಗುವುದು. ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ 25 ಲಕ್ಷ ರೂ.ವರೆಗಿನ ನಗದು ರಹಿತ ವಿಮೆಯ ರಾಜಸ್ಥಾನ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು. ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸರ್ಕಾರವು ಪ್ರತಿ ವರ್ಷ ಘೋಷಿಸುವ ಎಂಎಸ್‌ಪಿಗೆ ಕಾಂಗ್ರೆಸ್ ಕಾನೂನು ಖಾತರಿ ನೀಡುತ್ತದೆ ಎಂದು ಭರವಸೆ ನೀಡಲಾಗಿದೆ.
ಅಂತೆಯೇ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಅಗ್ನಿಪಥ್ ಯೋಜನೆ ರದ್ದು, ವಿವಿಧ ಹಂತಗಳಲ್ಲಿ 30 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗಿರುವ ಮೀಸಲಾತಿ ಮೀತಿ ಹೆಚ್ಚಳ ಹಾಗೂ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷವು ‘ಪಂಚ ನ್ಯಾಯ’, ‘25 ಗ್ಯಾರಂಟಿ’ಗಳನ್ನು ಘೋಷಿಸಿದೆ. ‘ಮನೆ ಮನೆ ಗ್ಯಾರಂಟಿ’ ಅಭಿಯಾನವು ಆರಂಭವಾಗಿದೆ. ದೇಶದಾದ್ಯಂತ ಸಮಾಲೋಚನೆಗಳನ್ನು ನಡೆಸಿ ಕಾಂಗ್ರೆಸ್, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಇ ಮೇಲ್ ಹಾಗೂ ‘ಆವಾಜ್ ಭಾರತ್ ಕಿ’ ವೆಬ್‌ಸೈಟ್ ಮೂಲಕ ಇದಕ್ಕೆ ಸಾವಿರಾರು ಸಲಹೆಗಳು ಬಂದಿದ್ದವು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.