ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್!
ಬೆಂಗಳೂರು: ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಕ್ಸ್‌ನಲ್ಲಿ ಧರ್ಮದ ಆಧಾರದಲ್ಲಿ ಮತ ಕೇಳಿದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ಎಕ್ಸ್‌ನಲ್ಲಿ ತಿಳಿಸಿದೆ.
ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇಂದು ಬೆಂಗಳೂರಿನಲ್ಲಿ ಮತದಾನ ಮಾಡಿದ ಸಂಸದ ತೇಜಸ್ವಿ ಸೂರ್ಯ, ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ಕೋರಿದ್ದರು.
ಆದರೆ ಇದರ ನಡುವೆಯೇ ಅವರು ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123(3)ರ ಅಡಿ ಪ್ರಕರಣ ದಾಖಲಾಗಿದೆ.
ಧರ್ಮದ ಆಧಾರದಲ್ಲಿ ಮತಯಾಚನೆ ಮತ್ತು ಈ ಕುರಿತು ವಿಡಿಯೊವೊಂದನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 123(3) ಅಡಿ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮತದಾನಕ್ಕೆ ಒಂದು ದಿನ ಮೊದಲು ಅಂದರೆ ಏಪ್ರಿಲ್ 25 ರಂದು ತೇಜಸ್ವಿ ಸೂರ್ಯ ತಮ್ಮ ಎಕ್ಸ್‌ನಲ್ಲಿ ಅಯೋಧ್ಯೆಯ (Ayodhya) ಬಾಲ ರಾಮನ ಹಣೆಗೆ ಸೂರ್ಯ ಸ್ಪರ್ಶಿಸುವ ವಿಡಿಯೋವನ್ನು ಅಪ್ಲೋಡ್ ಮಾಡಿ, ರಾಮ ನವಮಿಯಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮೇಲೆ ಭವ್ಯವಾದ ಸೂರ್ಯ ತಿಲಕವನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಆಶೀರ್ವದಿಸಲ್ಪಟ್ಟಿದೆ.
ಸುಮಾರು 500 ವರ್ಷಗಳ ಕಾಯುವಿಕೆ ಮತ್ತು ಕೋಟಿಗಟ್ಟಲೆ ಭಾರತೀಯರ ಆಶಯವನ್ನು ಪ್ರಧಾನಿ ಈಡೇರಿಸಿದ್ದಾರೆ. ಭಾರತೀಯತೆ ಉಳಿಯಲು ಬಿಜೆಪಿಗೆ ಮತ ನೀಡಿ ಎಂದು ಬರೆದುಕೊಂಡಿದ್ದರು.