ನೀನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು; ಸ್ಪರ್ಧೆಗಿಳಿಯದಂತೆ ನಿಮ್ಮಣ್ಣ ರಾಘವೇಂದ್ರಗೆ ಹೇಳು: ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯೊಳಗೆ ಬಂಡಾಯದ ಬಿಸಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಟಿಕೆಟ್ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಈಶ್ವರಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
'ಸ್ಪರ್ಧೆಗಿಳಿಯದಂತೆ ನಿಮ್ಮಣ್ಣ ರಾಘವೇಂದ್ರಗೆ ಹೇಳು, ನೀನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ಆಗ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆಂದು' ವಿಜಯೇಂದ್ರ ಅವರಿಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಕಾಲ ಮಿಂಚಿಲ್ಲ. ಪಕ್ಷಕ್ಕೆ ವಾಪಸ್ ಬನ್ನಿ. ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿ' ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಡಿರುವ ಮನವಿಗೆ ಈಶ್ವರಪ್ಪ ಅವರು ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವನು ಯಾರು? ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟುಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ ಎಂದು ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.
ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿದ್ದಾರೆ, ಅವರ ಪುತ್ರ ರಾಘವೇಂದ್ರ ಸಂಸದರಾಗಿದ್ದಾರೆ. ವಿಜಯೇಂದ್ರ ಸ್ವತಃ ಶಾಸಕರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ತಮ್ಮ ಕುಟುಂಬದ ಒಬ್ಬರಿಗೆ ನೀಡಬೇಕೆಂದು ಆರು ತಿಂಗಳ ಕಾಲ ಆ ಸ್ಥಾನ ಖಾಲಿ ಇರಿಸಲಾಗಿತ್ತು. ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈಯಲ್ಲಿ ಎಲ್ಲಾ ಅಧಿಕಾರ ಇರಬೇಕೇ?
ಸ್ಪರ್ಧೆ ಮಾಡಬೇಡಿ ಎಂದು ಹೇಳುವ ಮೊದಲು ನಿಮ್ಮ ಸಹೋದರನನ್ನು ಸ್ಪರ್ಧಿಸದಂತೆ ಹೇಳಿ. ನಾನು ಈಗಲೂ ಬಿಜೆಪಿ ಕಾರ್ಯಕರ್ತನೇ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದೇನೆ. ನಾನು ಸ್ಪರ್ಧಿಸಿದರೆ ಬಿಜೆಪಿ ಏನು ಮಾಡಲು ಸಾಧ್ಯ? ಪಕ್ಷದಿಂದ ಹೊರಹಾಕಬಹುದು ಅಲ್ಲವೇ? ಅದಷ್ಟನ್ನೇ ನೀವು ಮಾಡಲು ಸಾಧ್ಯ. ಆದರೆ, ಈ ಬಾರಿ ನಾನು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ನನ್ನನ್ನು ಪಕ್ಷದಿಂದ ಹೊರಹಾಕಿದರೆ, ಗೆಲುವು ಬಳಿಕ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆಂದು ಹೇಳಿದರು.
ಇದೇ ವೇಳೆ ಸಮಾನವನ್ನು ಬಯಸುವುದೇ ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಒಕ್ಕಲಿಗನಾಗಿರುವ ನನಗೆ ಅಥವಾ ಪಕ್ಷದ ನಾಯನಾಗಿರುವ ಸಿಟಿ ರವಿ, ಒಬಿಸಿ ನಾಯಕರಿಗೆ ನೀಡಲಿ ಎಂದು ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತ ಅಥವಾ ಪಕ್ಷದ ಮುಖಂಡ ಸಿ.ಟಿ.ರವಿ, ಒಕ್ಕಲಿಗ ಅಥವಾ ಒಬಿಸಿಗೆ ನೀಡಲಿ ಎಂದು ಯಡಿಯೂರಪ್ಪ ಕುಟುಂಬಕ್ಕೆ ಸವಾಲು ಹಾಕಿದರು.
ದೆಹಲಿಯಲ್ಲಿ ವರಿಷ್ಠರ ಭೇಟಿ ಸಾಧ್ಯವಾಗದ ಕುರಿತು ಮಾತನಾಡಿ, ಉನ್ನತ ನಾಯಕರು ಭೇಟಿ ಮಾಡಲು ಸಿಗದೇ ಇರುವುದರ ಅರ್ಥ ಬಿಜೆಪಿಯನ್ನು ಯಡಿಯೂರಪ್ಪ ಕುಟುಂಬದಿಂದ ಮುಕ್ತಗೊಳಿಸಬೇಕೆಂಬುದಾಗಿದೆ. ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಸೋಲಿಸಬೇಕೆಂಬುದಾಗಿದೆ ಎಂದು ಹೇಳಿದರು.