ಹುಬ್ಬಳ್ಳಿ; ಅಜ್ಜಿ, ಇಬ್ಬರು ಸಹೋದರಿಯರ ಮುಂದೆಯೇ ಯುವತಿಯ ಬರ್ಬರ ಹತ್ಯೆ; ಪ್ರೀತಿಸಲು ನಿರಾಕರಿಸಿದ್ದಕ್ಕೆ ಚೂರಿಯಿಂದ ಇರಿದ ಆರೋಪಿ ಗಿರೀಶ್ ಸಾವಂತ್
ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆಯ ಕಹಿ ನೆನಪು ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದು, ನಸುಕಿನ ಜಾವ ನಸುನಿದ್ದೆಯಲ್ಲಿದ್ದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ ಎಂಬಾತ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.
ಈ ಭೀಕರ ಹತ್ಯೆ ಮಾಡಿದ ಘಟನೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿ ಸಾಕ್ಷಿಯಾಗಿದೆ. ಮೃತ ಯುವತಿಯನ್ನು ಅಂಜಲಿ ಅಂಬಿಗೇರ ಎಂದು ಗುರುತಿಸಲಾಗಿದೆ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈ ಯುವತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಪ್ರೇಮ ನಿರಾಕರಣೆಯ ಕಾರಣಕ್ಕೆ ತಾನು ಪ್ರೀತಿಸಿದ್ದ ಯುವತಿಯನ್ನೇ ಗಿರೀಶ್ ಸಾವಂತ್ ಎಂಬ ಕ್ರೂರಿ ಚಾಕುವಿನಿಂದ ಇರಿದು ಕೊಂದುಹಾಕಿದ್ದಾನೆ. ವೀರಾಪುರ ಓಣಿಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಹಂತಕ ಆಕೆಯ ಮನೆಗೇ ನುಗ್ಗಿ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಂದುಹಾಕಿದ್ದಾನೆ.
ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಅಂಜಲಿ ಅಂಬಿಗೇರಗೆ ವಿಶ್ವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿದ್ದಾನೆ.
ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.
ಆರೋಪಿ ವಿಶ್ವ ಅಂಜಲಿಗೆ ಧಮ್ಕಿ ಹಾಕಿರುವ ವಿಚಾರವಾಗಿ ಆಕೆಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಅಜ್ಜಿಯ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡದ ಪೊಲೀಸರು, ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು. ಪರಿಣಾಮವಾಗಿ ಇದೀಗ ಮತ್ತೊಂದು ಕೊಲೆಯಾಗಿದೆ.
ಕ್ರೌರ್ಯದ ಪರಮಾವಧಿ
ಮನೆಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ, ವಿದ್ಯಾರ್ಥಿನಿ ನೇಹಾರನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಏಪ್ರಿಲ್ 18ರಂದು ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ರಾಜ್ಯದಾದ್ಯಂತ ರಾಜಕೀಯವಾಗಿಯೂ ಭಾರಿ ಸದ್ದು ಮಾಡಿತ್ತು. ಇದೀಗ ಅಂಥದ್ದೇ ಮತ್ತೊಂದು ಕೃತ್ಯ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.