ಬೆಂಬಲಿಗರ ಸಭೆ ನಡೆಸಿದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್! ಹಿಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದರು!; ಬೆಂಬಲಿಗರ ಸಭೆಯಲ್ಲಿ ರಘುಪತಿ ಭಟ್ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ
ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಲ್ಲಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ರಘುಪತಿ ಭಟ್ ಬುಧವಾರ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.
ಇದೇ ಸಂದರ್ಭ ಅವರ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಯಿತು. ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ರಘುಪತಿ ಭಟ್, ನಾನು ಇಂದು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾನು ಬಿಜೆಪಿಗಾಗಿ ಹಗಲಿರುಳು ದುಡಿದಿದ್ದೇನೆ. ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ. ಹಲವಾರು ಚರ್ಚೆ ಮತ್ತು ಲೆಕ್ಕಾಚಾರಗಳ ನಂತರ ನಾನು ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಅದರಂತೆ ನಾಳೆ (ಮೇ 16) ನೈರುತ್ಯ ಪದವೀಧರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದು ಪಕ್ಕಾ ಎಂದರು.
ಅವಕಾಶಗಳನ್ನು ನಿರಾಕರಿಸಿದರೂ ಕರಾವಳಿಯ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ನಮ್ಮ ನಾಯಕರು ನಂಬಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಲು ಯಾರು ಷಡ್ಯಂತ್ರ ಮಾಡಿದರು ಎಂಬುದು ನನಗೆ ತಿಳಿದಿದೆ. ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಇತ್ತು. ನಾನು ಯಾವುದೇ ಒತ್ತಡಕ್ಕೆ ಮಣಿಯದೆ ಪಕ್ಷದ ಹಿತದೃಷ್ಟಿಯಿಂದ ಪಕ್ಷಕ್ಕಾಗಿ ದುಡಿದೆ. ಆದರೆ, ನನಗೆ ಪಕ್ಷದ ನಾಯಕರಿಂದ ಯಾವುದೇ ಗೌರವ, ಮನ್ನಣೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ನೀಡಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಪಕ್ಷದ ಎಲ್ಲಾ ಕಟ್ಟುಪಾಡು, ಸಂಪ್ರದಾಯಗಳನ್ನು ಮುರಿದಿದ್ದಾರೆ. ಧನಂಜಯ್ ಸರ್ಜಿ ಅವರ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಆದರೆ, ಅವರು ಕೇವಲ ಒಂದು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡರು. ಅಲ್ಲದೆ, ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿ ನಡೆಸಿದ ಶಾಂತಿಯ ನಡೆ ಎಂಬ ಕಾರ್ಯಕ್ರಮದ ನೇತೃತ್ವ ವಹಿಸಿ, ಸಂಘ ಪರಿವಾರದ ವಿರುದ್ಧ ನಡೆದುಕೊಂಡ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ವೇಳೆ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಪಕ್ಷದ ಕಚೇರಿಯಿಂದ ನನ್ನ ಛಾಯಾಚಿತ್ರಗಳನ್ನು ತೆಗೆಯಲಾಗಿತ್ತು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಾಗುತ್ತಿದೆ. ಆದರೆ ಅಂತಹ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಈ ವರ್ತನೆಯಿಂದ ನನಗೆ ನೋವಾಗಿದೆ, ನನಗೆ ಒಂದು ಅವಕಾಶ ಕೊಡಿ ಮತ್ತು ಎಂಎಲ್‌ಸಿ ಹೇಗೆ ಕೆಲಸ ಮಾಡಬೇಕು ಎಂದು ನಾನು ತೋರಿಸುತ್ತೇನೆ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ಸೋತರೂ ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಸಭೆಯಲ್ಲಿ ಬಾಲಾಜಿ ರಾಘವೇಂದ್ರ ಆಚಾರ್ಯ, ಕೆ.ಟಿ.ಪೂಜಾರಿ, ಉಪೇಂದ್ರ ನಾಯಕ್, ಕರಂಬಳ್ಳಿ ರಘುರಾಮ ಶೆಟ್ಟಿ, ಪಾಂಡುರಂಗ ಮಲ್ಪೆ, ಶ್ರೀನಿವಾಸ ಉಡುಪ, ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಜಯರಾಮ ಆಚಾರ್ಯ ಕರಂಬಳ್ಳಿ, ಸರಸ್ವತಿ ಬಾರಿತ್ತಾಯ ಮೊದಲಾದವರು.