
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತೀ ತಿಂಗಳು 8,500 ರೂ ಜಮೆ: ಪ್ರಿಯಾಂಕಾ ಗಾಂಧಿ
ರಾಯ್ ಬರೇಲಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತೀ ತಿಂಗಳು 8,500 ರೂ ಜಮೆ ಮಾಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಗುರುವಾರ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದ ಮಹಿಳೆಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಸರ್ಕಾರ ರಚನೆಯಾದರೆ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ.
ದೇಶದಾದ್ಯಂತ ನಮ್ಮ ಸಹೋದರಿಯರು ಉತ್ಸಾಹದಿಂದ INDIA ಸರ್ಕಾರವನ್ನು ರಚಿಸಲು ಸಿದ್ಧರಾಗಿದ್ದು, ಜುಲೈನಿಂದ, ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8500 ರೂ. ಅಂದರೆ, ವಾರ್ಷಿಕವಾಗಿ 1 ಲಕ್ಷ ರೂ. ಠೇವಣಿ ಇಡುತ್ತೇವೆ. ಇದರಿಂದ ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.
ಅಂತೆಯೇ ಸರ್ಕಾರಿ ಉದ್ಯೋಗಗಳ ಪಾಲು ಮಹಿಳಾ ಶಕ್ತಿಯನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದ ಪ್ರಿಯಾಂಕಾ, 'ಆಶಾ, ಅಂಗನವಾಡಿ ಹಾಗೂ ಅಡುಗೆಯ ಸಹೋದರಿಯರ ಗೌರವಧನಕ್ಕೆ ಕೇಂದ್ರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು. 25 ಲಕ್ಷ ರೂ.ಗಳ ವಿಮಾ ಯೋಜನೆ ನಿಮ್ಮನ್ನು ವೈದ್ಯಕೀಯ ವೆಚ್ಚದ ಕೂಪದಿಂದ ಹೊರತರಲಿದೆ ಎಂದು ಭರವಸೆ ನೀಡಿದರು.
ಕಳೆದವಾರವಷ್ಟೇ ಕಾಂಗ್ರೆಸ್ ನಾಯಕ ಹಾಗೂ ತಮ್ಮ ಸಹೋದರ ರಾಹುಲ್ ಗಾಂಧಿ ಪರ ಪ್ರಚಾರ ಮಾಡುವಾಗ, 'ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದರು.
'ಹಣದುಬ್ಬರದಿಂದ ಜನಜೀವನ ದುಸ್ತರವಾಗಿದೆ ಎಂದು ದೇಶಾದ್ಯಂತ ಮಹಿಳೆಯರು ಹೇಳುತ್ತಿದ್ದಾರೆ, ಮನೆ ನಿರ್ವಹಣೆ ಕಷ್ಟವಾಗುತ್ತಿದ್ದು, ಪ್ರತಿ ಗೃಹೋಪಯೋಗಿ ವಸ್ತು ಕೈಗೆಟುಕದಂತಾಗಿದೆ. 400 ರೂ.ಗಳ ಸಿಲಿಂಡರ್ ಈಗ 1200 ರೂಗೆ ಏರಿಕೆಯಾಗಿದೆ. ಅಡುಗೆ ಎಣ್ಣೆ, ಬೇಳೆಕಾಳುಗಳು, ಹಿಟ್ಟು, ಸಕ್ಕರೆ, ಅಕ್ಕಿ, ತರಕಾರಿ ಎಲ್ಲವೂ ಅತ್ಯಂತ ದುಬಾರಿಯಾಗಿದೆ ಎಂದು ಅವರು ಆರೋಪಿಸಿದರು.
ಅಲ್ಲದೆ ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ, ಇಂದು ಸಾರ್ವಜನಿಕರು ಉತ್ತರದಾಯಿತ್ವಕ್ಕೆ ಆಗ್ರಹಿಸುತ್ತಿದ್ದು, ಪ್ರಧಾನಿ ಉತ್ತರ ನೀಡುವ ಬದಲು ಅಸಂಬದ್ಧ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ದೇಶವಾಸಿಗಳು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅರಿತು ಮತ ಚಲಾಯಿಸುತ್ತಾರೆ ಎಂದು ಪ್ರಿಯಾಂಕಾ ಹೇಳಿದ್ದರು.