ರಘುಪತಿ ಭಟ್ ಬಂಡಾಯವಾಗಿ ಸ್ಪರ್ಧಿಸಲ್ಲ ಎಂಬ ವಿಶ್ವಾಸವಿದೆ: ಡಾ.ಧನಂಜಯ ಸರ್ಜಿ
ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿಲುವು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ಇದೆ. ಮತ್ತೆ ಅವರು ಪಕ್ಷದ ಜೊತೆ ಸೇರಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ರಘುಪತಿ ಭಟ್ ಅವರ ಬಗ್ಗೆ ಬಹಳ ಗೌರವ ಇದೆ. ಅವರು ಪಕ್ಷ ನಿಷ್ಠೆಯಿಂದ ನಡೆದುಕೊಂಡು ಬಂದವರು. ಅವರೊಂದಿಗೆ ಪಕ್ಷದ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದರು.
ಸಂಘಪರಿವಾರದ ವಿರುದ್ಧ ಚಳವಳಿ ನಡೆಸಿದ್ದಾರೆಂಬ ರಘುಪತಿ ಭಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸರ್ಜಿ ಅವರು, ನಾನು ಆರ್‌ಎಸ್‌ಎಸ್ ವಿರುದ್ಧ ಯಾವುದೇ ಚಳವಳಿ ಮಾಡಿಲ್ಲ. ನಾನು ಆರ್‌ಎಸ್‌ಎಸ್‌ನ ನಿಷ್ಟಾವಂತ ಸ್ವಯಂ ಸೇವಕನಾಗಿದ್ದೇನೆ. ಶಿವಮೊಗ್ಗದ ಗಲಭೆಗೆ ಸಂಬಂಧಿಸಿ ಎಲ್ಲ ಧರ್ಮಗಳ ಗುರುಗಳು ಸೇರಿ ಶಾಂತಿಗಾಗಿ ನಡೆಸಿದ ಮೆರವಣಿಗೆಯಲ್ಲಿ ನಾನು ಭಾಗವಹಿಸಿದ್ದೇನೆ ಹೊರತು ಯಾವುದೇ ಸಂಘಟನೆಯ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಡಿ.ಎಸ್.ಅರುಣ್, ದಿನಕರ ಶೆಟ್ಟಿ, ಶಿಲ್ಪಾ ಸುವರ್ಣ, ಮಟ್ಟಾರ್ ರತ್ನಾಕರ್ ಹೆಗ್ಡೆ ಉಪಸ್ಥಿತರಿದ್ದರು.