ವನ್ಯಜೀವಿಗಳ ಸಂರಕ್ಷಣೆ-ಜನರ ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧತೆಯಾಗಿದೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ವನ್ಯಜೀವಿಗಳ ಸಂರಕ್ಷಣೆ ಮತ್ತು ಜನರ ಸುರಕ್ಷತೆ — ಎರಡನ್ನೂ ಸಮತೋಲನದಿಂದ ಕಾಪಾಡುವುದು ಕರ್ನಾಟಕ ಸರ್ಕಾರದ ಬದ್ಧತೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. 

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬಳಿಕ ಷರತ್ತುಬದ್ಧವಾಗಿ ಪುನರಾರಂಭ ಮಾಡಿದ ಕ್ರಮದ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆಯವರು ಸ್ಪಷ್ಟನೆ ನೀಡಿದರು.

ಕಳೆದ ನವೆಂಬರ್‌ನಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಮೂರು ಗಂಭೀರ ಹುಲಿದಾಳಿ ಘಟನೆಗಳು ಸಂಭವಿಸಿ ಅಮೂಲ್ಯ ಜೀವಹಾನಿ ಆಗಿತ್ತು. ಜನರ ಜೀವ ರಕ್ಷಣೆ ನಮ್ಮ ಮೊದಲ ಆದ್ಯತೆ ಆದ್ದರಿಂದ ಸುರಕ್ಷತಾ ಕ್ರಮವಾಗಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಿ, ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಿ, ಸಿಬ್ಬಂದಿಯಿಂದ ಗಸ್ತು ವ್ಯವಸ್ಥೆ ಮಾಡಿ ಹಾಗೂ ತಜ್ಞರ ಸಮಿತಿಯ ಸಲಹೆಯ ಆಧಾರದಲ್ಲಿ ಇದೀಗ ಸಫಾರಿಯನ್ನು ಪುನರಾರಂಭಿಸಲಾಗಿದೆ ಎಂದ ಸಚಿವರು ವನ್ಯಜೀವಿಗಳ ಸಂರಕ್ಷಣೆ ಮತ್ತು ಜನರ ಸುರಕ್ಷತೆ — ಎರಡನ್ನೂ ಸಮತೋಲನದಿಂದ ಕಾಪಾಡುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಸಚಿವರು ಹೇಳಿದರು.