ಬಿಜೆಪಿ ಗೆದ್ದರೆ ಮಮತಾ, ಠಾಕ್ರೆ, ತೇಜಸ್ವಿ ಸೇರಿದಂತೆ ಎಲ್ಲಾ ಪ್ರತಿಪಕ್ಷ ನಾಯಕರು ಜೈಲು ಪಾಲಾಗಲಿದ್ದಾರೆ: ಅರವಿಂದ್ ಕೇಜ್ರಿವಾಲ್; ಮೋದಿಯ ‘ಒಂದು ರಾಷ್ಟ್ರ ಒಂದು ನಾಯಕ’ ಮಿಷನ್ ಅಪಾಯಕಾರಿ
ನವದೆಹಲಿ: ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಎಲ್ಲಾ ಪ್ರತಿಪಕ್ಷ ನಾಯಕರು ಜೈಲು ಪಾಲಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರಇಂದು ಎಎಪಿ ಪ್ರಧಾನ ಕಚೇರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಪ್ರತಿಪಾದಿಸಿದರು ಮತ್ತು ಜೂನ್ 4 ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ದೇಶದಲ್ಲಿ 'ಸರ್ವಾಧಿಕಾರ' ಉದಯವಾದಾಗಲೆಲ್ಲಾ ಜನರು ಕಿತ್ತೊಗೆದಿದ್ದಾರೆ ಎಂದ ದೆಹಲಿ ಸಿಎಂ, 'ಸರ್ವಾಧಿಕಾರ'ವನ್ನು ಕೊನೆಗೊಳಿಸಲು ಮತ್ತು ಭಾರತವನ್ನು ಉಳಿಸಲು ನಾನು ಅವಿರತವಾಗಿ ಶ್ರಮಿಸುತ್ತೇನೆ, ದೇಶಾದ್ಯಂತ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ಪುನರುಚ್ಚರಿಸಿದ ಕೇಜ್ರಿವಾಲ್, "ಜೈಲಿನಿಂದ ಬಿಡುಗಡೆಯಾದ ನಂತರ ಕಳೆದ 20 ಗಂಟೆಗಳಲ್ಲಿ ನಾನು ಚುನಾವಣಾ ತಜ್ಞರು ಮತ್ತು ಜನರೊಂದಿಗೆ ಮಾತನಾಡಿದ್ದೇನೆ ಮತ್ತು ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ತಿಳಿದುಕೊಂಡಿರುವುದಾಗಿ" ಕೇಜ್ರಿವಾಲ್ ಹೇಳಿದರು.
"ಎಎಪಿ ಕೇಂದ್ರದಲ್ಲಿ ಸರ್ಕಾರದ ಭಾಗವಾಗಲಿದೆ. ನಾವು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಪಡೆಯುತ್ತೇವೆ" ಎಂದು ಕೇಜ್ರಿವಾಲ್ ತಿಳಿಸಿದರು.
ಮೋದಿ ಅವರಿಗೆ ಅತ್ಯಂತ ಅಪಾಯಕಾರಿ ಮಿಷನ್ ಇದೆ. ಅದೇನೆಂದರೆ ‘ಒಂದು ರಾಷ್ಟ್ರ ಒಂದು ನಾಯಕ’. ಅವರು ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಆರೋಪಿಸಿದರು.
ಮೋದಿ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲು ಪ್ರಧಾನಿ ಬಯಸುತ್ತಿದ್ದಾರೆ. “ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದರೆ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಪಿಣರಾಯಿ ವಿಜಯನ್ ಮತ್ತು ಇತರ ಹಲವಾರು ವಿರೋಧ ಪಕ್ಷದ ನಾಯಕರು ಜೈಲು ಪಾಲಾಗುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರವಾಗಿ ಮತ ಕೇಳುತ್ತಿದ್ದಾರೆ. ನಾನು ಬಿಜೆಪಿಯನ್ನು ಕೇಳುತ್ತೇನೆ ನಿಮ್ಮ ಪ್ರಧಾನಿ ಯಾರು? ಮುಂದಿನ ವರ್ಷ ಸೆಪ್ಟೆಂಬರ್ 17 ರಂದು ಮೋದಿ 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಪಕ್ಷದಲ್ಲಿ 75ನೇ ವರ್ಷಕ್ಕೆ ನಿವೃತ್ತರಾಗುತ್ತಾರೆ ಎಂದು ಅವರೇ ನಿಯಮ ಮಾಡಿದ್ದಾರೆ. ಹೀಗಾಗಿ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರು ನಿವೃತ್ತರಾದರು ಎಂದು ಕೇಜ್ರಿವಾಲ್ ಹೇಳಿದರು.