ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ; ಬ್ಲೂ ಕಾರ್ನರ್ ನೋಟಿಸ್ ಜಾರಿ: ಗೃಹ ಸಚಿವ ಜಿ ಪರಮೇಶ್ವರ್ ಈ ಬಗ್ಗೆ ಹೇಳಿದ್ದೇನು...?
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮನವಿ ಬೆನ್ನಲ್ಲೇ ಸಿಬಿಐ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್, ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಪತ್ತೆಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (SIT) ರಾಜ್ಯ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.
"ಎಸ್ಐಟಿ ಕಾರ್ಯವಿಧಾನದ ಪ್ರಕಾರ ಕೆಲಸ ಮಾಡುತ್ತಿದೆ ಮತ್ತು ನ್ಯಾಯಯುತ ತನಿಖೆ ನಡೆಸಲಾಗುವುದು. ನ್ಯಾಯಯುತ ತನಿಖೆಗಾಗಿ ನಾವು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರು ಈಗಾಗಲೇ ಆ ಕೆಲಸದಲ್ಲಿದ್ದಾರೆ. ದೇಶದಿಂದ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ ಎಂಬ ವರದಿಗಳ ಬಗ್ಗೆ ಕೇಳಿದಾಗ, "ಅವರನ್ನು ಹುಡುಕಲು ಬ್ಲೂ ಕಾರ್ನರ್ ನೋಟಿಸ್ ನೀಡಿರುವುದು ನಿಜ. ಸಂಬಂಧಪಟ್ಟ ಅಧಿಕಾರಿಗಳು ಆತನನ್ನು ಪತ್ತೆಹಚ್ಚುತ್ತಾರೆ.
ನಾವು ಅವರನ್ನು ದೇಶಕ್ಕೆ ಮರಳಿ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಅವರನ್ನು ಭಾರತಕ್ಕೆ ಕರೆತರಲು ಎಸ್ಐಟಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಅವರು ಮಾಹಿತಿ ನೀಡಿದರು.
ಈ ಬ್ಲೂ ಕಾರ್ನರ್ ನೋಟಿಸ್ ಇಂಟರ್‌ಪೋಲ್ ಕಲರ್-ಕೋಡೆಡ್ ನೋಟೀಸ್‌ನ ಒಂದು ಭಾಗವಾಗಿದ್ದು, ಇದು "ಜಗತ್ತಿನಾದ್ಯಂತ [ಅಪೇಕ್ಷಿತ ವ್ಯಕ್ತಿಗಳು/ಅಪರಾಧಗಳ ಕುರಿತು] ಮಾಹಿತಿಗಾಗಿ ಎಚ್ಚರಿಕೆಗಳು ಮತ್ತು ವಿನಂತಿಗಳನ್ನು ಹಂಚಿಕೊಳ್ಳಲು ದೇಶಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ತನಿಖೆ ನೆರವಾಗುತ್ತದೆ ಎಂದು ಹೇಳಲಾಗಿದೆ.
ಅಂತೆಯೇ ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ‘ಬ್ಲೂ ಕಾರ್ನರ್ ನೋಟಿಸ್’ ಹೊರಡಿಸುವ ಸಾಧ್ಯತೆಯ ಬಗ್ಗೆಯೂ ಎಸ್‌ಐಟಿ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆಯೇ ಮಾಹಿತಿ ನೀಡಿದ್ದಾರೆ. ಪ್ರಜ್ವಲ್ ವಿರುದ್ಧದ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಎಸ್‌ಐಟಿ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ಈ ವೇಳೆ ಪ್ರಜ್ವಲ್ ಅವರನ್ನು ಬಂಧಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಜ್ವಲ್ ನನ್ನು ಬಂಧಿಸಿ ಶೀಘ್ರ ವಾಪಸ್ ಕರೆತರುವುದಾಗಿ ಅಧಿಕಾರಿಗಳು ಭರವಸೆ ನೀಡಿದರು ಎಂದು ಹೇಳಲಾಗಿದೆ.
ವಿಚಾರಣೆಗೆ ಪ್ರಜ್ವಲ್ ರೇವಣ್ಣ ಗೈರು
ಇನ್ನು ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಮಂಗಳವಾರ ನೋಟಿಸ್, ಗುರುವಾರ ಮತ್ತು ಶುಕ್ರವಾರ ಲುಕ್‌ಔಟ್ ನೋಟಿಸ್ ಜಾರಿ ಮಾಡಿದರೂ ಪ್ರಜ್ವಲ್ ಎಸ್‌ಐಟಿ ಮುಂದೆ ಹಾಜರಾಗಿರಲಿಲ್ಲ. ಏಪ್ರಿಲ್ 27ರಂದು ಜರ್ಮನಿಗೆ ತೆರಳಿದ್ದರು ಎನ್ನಲಾಗಿದ್ದು, ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿರುವ ಪ್ರಜ್ವಲ್ ಗೆ ವಿದೇಶಕ್ಕೆ ತೆರಳಲು ಯಾವುದೇ ವೀಸಾ ಅಗತ್ಯವಿಲ್ಲ.
ಮೊದಲ ನೋಟೀಸ್ ನೀಡಿದ ನಂತರ ಸಂಸದರು ತಮ್ಮ ವಕೀಲರ ಮೂಲಕ ಎಸ್‌ಐಟಿ ಮುಂದೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೋರಿದ್ದರು. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಪ್ರಜ್ವಲ್ ಅವರು ಮೇ 15 ರಂದು ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಿದ್ದಾರೆ ಮತ್ತು ಮೇ 16 ರ ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂದು ಹೇಳಲಾಗಿದೆ.