ಶಿರ್ವ ಮಾಣಿಬೆಟ್ಟು ಸಮೀಪ ಸಿಡಿಲು ಬಡಿದು ಕಾಲೇಜು ವಿದ್ಯಾರ್ಥಿ ಸಾವು
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಸುರಿದ ಭಾರಿ ಮಳೆಯ ಸಿಡಿಲು ಬಡಿದು ಯುವಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ಕಾಪು ತಾಲೂಕು ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಘಟನೆ ನಡೆಡಿದ್ದು, ಮೃತ ಯುವಕನನ್ನು ರಕ್ಷಿತ್ ಪೂಜಾರಿ(20) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪೂಜಾರಿ ಅವರು ತಮ್ಮ ಮನೆಯ ಹೊರಾಂಗಣ ವಾಶ್ ರೂಂ ಬಳಿ ನಿಂತಿದ್ದಾಗ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶಿರ್ವ ಮಾಣಿಬೆಟ್ಟುವಿನ ತೋಟದಮನೆಯಲ್ಲಿ ವಾಸಿಸುತ್ತಿದ್ದ ರಕ್ಷಿತ್ ಪೂಜಾರಿ ಅವರು ಶಿರ್ವದ MSRS ಕಾಲೇಜಿನಲ್ಲಿ ಎರಡನೇ ವರ್ಷದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್(BCA) ಮಾಡುತ್ತಿದ್ದರು.
ಬೈಂದೂರು ಹೆಬ್ರಿ ತಾಲೂಕಿನ ಕೆಲವೆಡೆ ನಿನ್ನೆ ಗಾಳಿ ಮಳೆಯಾಗಿದೆ. ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಉಡುಪಿ ಜಿಲ್ಲೆಯಲ್ಲಿ ಸರಾಸರಿ 15 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಕಾಪು ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು 28 ಮಿಲಿ ಮೀಟರ್ ಮಳೆ ಬಿದ್ದಿದೆ. ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾಧಾರಣ ಮಳೆ ಬೀಳಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಇದೆ.