
ಬಣಕಲ್-ಕೊಟ್ಟಿಗೆಹಾರ ಬಳಿ ಮೆಸ್ಕಾಂ ಲಾರಿ, ಕಾರುಗಳ ನಡುವೆ ಸರಣಿ ಅಪಘಾತ; ನಾಲ್ವರು ಬಲಿ
ಚಿಕ್ಕಮಗಳೂರು: ಮೆಸ್ಕಾಂ ಲಾರಿ, ಓಮಿನಿ ಹಾಗೂ ಆಲ್ಟೋ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ ಘಟನೆ ಮೂಡಿಗೆರೆಯ ಬಣಕಲ್-ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಒಂದೇ ಕುಟುಂಬದವರಾಗಿದ್ದಾರೆ. ಧರ್ಮಸ್ಥಳಕ್ಕೆ ತೆರಳಿದ್ದ ಒಂದೇ ಕುಟುಂಬದವರು ಓಮ್ನಿ ವ್ಯಾನ್ ಮತ್ತು ಆಲ್ಟೊ ಕಾರಿನಲ್ಲಿ ಚಿತ್ರದುರ್ಗಕ್ಕೆ ವಾಪಸ್ ಹೋಗುತ್ತಿದ್ದರು. ಚಾರ್ಮಾಡಿ ಘಾಟಿ ಹತ್ತಿರ ಕೊಟ್ಟಿಗೆಹಾರ ದಾಟಿ ಮೂಡಿಗೆರೆ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಮೆಸ್ಕಾಂ ಲಾರಿಯು ಓಮ್ನಿ ವ್ಯಾನ್‌ಗೆ ಮೊದಲು ಡಿಕ್ಕಿ ಹೊಡೆದಿದೆ. ವ್ಯಾನಿನ ಹಿಂದೆ ಬರುತ್ತಿದ್ದ ಆಲ್ಟೊ ಕಾರು ಕೂಡ ವ್ಯಾನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಲಾರಿ ಗುದ್ದಿದ ರಭಸಕ್ಕೆ ವ್ಯಾನ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ, ಮಾರ್ಗಮಧ್ಯ ಅವರೂ ಮೃತಪಟ್ಟರು.
ಮೃತಪಟ್ಟವರನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಹಂಪಯ್ಯ(65), ಪ್ರೇಮಾ(58), ಮಂಜಯ್ಯ(60) ಮತ್ತು ಪ್ರಭಾಕರ(45) ಎಂದು ಗುರುತಿಸಲಾಗಿದೆ. ಓಮ್ನಿ ವ್ಯಾನ್‌ನಲ್ಲಿ ಒಂಬತ್ತು ಮಂದಿ ಮತ್ತು ಆಲ್ಟೊ ಕಾರಿನಲ್ಲಿ ಏಳು ಜನ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಲ್ಟೊ ಕಾರಿನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಬಣಕಲ್ ಠಾಣೆ ಪೊಲೀಸರು, ಮೃತದೇಹವನ್ನು ಮೂಡಿಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿನ ಶವಾಗಾರಕ್ಕೆ ಸಾಗಿಸಿದರು. ಲಾರಿ ಗುದ್ದಿದ ರಭಸಕ್ಕೆ ಓಮ್ನಿ ವ್ಯಾನ್ ಸಂಪೂರ್ಣ ನುಜ್ಜುಗುಜ್ಜಾಗಿದೆ.