ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕುಲ್ವಿಂದರ್ ಕೌರ್
ಚಂಡೀಗಢ: ನನ್ನ ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ ಎಂದು ನೂತನ ಸಂಸದೆ ಕಂಗನಾ ರಣಾವತ್‍ಗೆ ಕಪಾಳಮೋಕ್ಷ ಮಾಡಿದ್ದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ಅಮಾನತು ಮಾಡಿ, ಬಂಧಿಸಲಾಗಿದೆ. ಇದಕ್ಕೂ ಮುನ್ನ ಅವರು, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಕೆಲಸವನ್ನು ಕಳೆದುಕೊಳ್ಳುವ ಭಯವಿಲ್ಲ. ನಾನು ಸಿದ್ಧಳಿದ್ದೇನೆ, ನನ್ನ ತಾಯಿಯ ಗೌರವಕ್ಕಾಗಿ ಇಂತಹ ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಂಗನಾ ರಣಾವತ್ ಅವರು ಗುರುವಾರ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ, ವಿಮಾನ ನಿಲ್ದಾಣದಲ್ಲಿ ಕೌರ್ ಅವರು ಕಪಾಳಮೋಕ್ಷ ಮಾಡಿದ್ದರು.
2020ರಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬೃಹತ್ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ನಟಿ ಕಂಗನಾ, ರೈತರು 100 ರೂ.ಗೆ ಅಲ್ಲಿ ಕುಳಿತಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದರು. ನಟಿ ಈ ಹೇಳಿಕೆ ನೀಡಿದಾಗ ತನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಹಾಗಾಗಿ ನಟಿ ಹೇಳಿಕೆಯಿಂದ ನೋವುಂಟಾಗಿದ್ದು, ಕಪಾಳಮೋಕ್ಷ ಮಾಡಿದೆ ಎಂದು ಕೌರ್ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು.