ಬಿಜೆಪಿ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಯೋಧೆಗೆ ಭಾರೀ ಬೆಂಬಲ; ಜೂನ್ 9ರಂದು ಮೊಹಾಲಿಯಲ್ಲಿ ‘ನ್ಯಾಯ ಯಾತ್ರೆ’

ಬಿಜೆಪಿ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಯೋಧೆಗೆ ಭಾರೀ ಬೆಂಬಲ; ಜೂನ್ 9ರಂದು ಮೊಹಾಲಿಯಲ್ಲಿ ‘ನ್ಯಾಯ ಯಾತ್ರೆ’

ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್‌ ಮುಖಕ್ಕೆ ಗುದ್ದಿದ ಕೇಂದ್ರೀಯ ಭದ್ರತಾ ಪಡೆಯ (ಸಿಐಎಸ್ಎಫ್) ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. 

ಸೇವೆಯಿಂದ ಅಮಾನತುಗೊಂಡಿರುವ ಕುಲ್ವಿಂದರ್ ಪರ ಕೆಲವು ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ಈ ಘಟನೆಗೆ ಕಾರಣವೇನು ಎಂಬುದರ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ. 

ಪ್ರಮುಖವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು, ತಾವು ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಪರ ನಿಲ್ಲುವುದಾಗಿ ಘೋಷಿಸಿವೆ.  

ರೈತರ ಪ್ರತಿಭಟನೆ ಕುರಿತಾಗಿ ಕಂಗನಾ ಅವರ ಹೇಳಿಕೆಯಿಂದ ಅಸಮಾಧಾನಗೊಂಡು ನಟಿಯ ಕಪಾಳಕ್ಕೆ ಹೊಡೆದಂತೆ ಕಂಡುಬರುತ್ತಿದೆ. ಈ ಸಂಬಂಧ ಮಹಿಳಾ ಸಿಬ್ಬಂದಿಯನ್ನು ಸಿಐಎಸ್ಎಫ್ ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಿದೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವರಣ್ ಸಿಂಗ್ ಪಾಂಧೇರ್, ‘ಘಟನೆ ಕುರಿತು ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ, ಸರಿಯಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ. ಅಲ್ಲದೆ, ಮಹಿಳಾ ಕಾನ್‌ಸ್ಟೆಬಲ್‌ಗೆ ಅನ್ಯಾಯವಾಗಬಾರದು ಎಂದು ಅವರಿಗೆ ತಿಳಿಸುವೆ’ ಎಂದು ಹೇಳಿದರು. 

ಜೂನ್ 9ರಂದು ಮೊಹಾಲಿಯಲ್ಲಿ ಸಿಐಎಸ್ಎಫ್ ಕಾನ್‌ಸ್ಟೆಬಲ್‌ ಪರ ‘ನ್ಯಾಯ ಯಾತ್ರೆ’ ನಡೆಸಲಾಗುವುದು ಎಂದರು. 

ಮತ್ತೊಂದೆಡೆ ಸಿಐಎಸ್ಎಫ್ ಸಿಬ್ಬಂದಿ ಕೆಲಸ ಕಳೆದುಕೊಂಡಲ್ಲಿ, ಅವರ ಜೀವನೋಪಾಯಕ್ಕಾಗಿ ಕ್ರೌಡ್‌ಫಂಡಿಂಗ್ ಮೂಲಕ ಅವರಿಗೆ ನೆರವು ನೀಡಲಾಗುವುದು ಎಂದು ಕೆಲವು ಸಂಘಟನೆಗಳು ತಿಳಿಸಿವೆ. 

ರೈತ ವಿರೋಧಿ ಹೇಳಿಕೆಗಾಗಿ ಕಪಾಳಮೋಕ್ಷ: ನಟಿ ಕಂಗನಾ ಅವರಿಗೆ ಕಪಾಳಕ್ಕೆ ಹೊಡೆದ ಬಳಿಕ ಜನರೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಮಾತನಾಡಿದ್ದಾರೆ ಎಂಬಂತೆ ಇರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕುಲ್ವಿಂದರ್ ಅವರಿಗೆ ತಾವು ಕೆಲಸ ಕೊಡಲು ಸಿದ್ಧ ಎಂದು ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಶಾಲ್ ದದ್‌ಲಾನಿ ಹೇಳಿರುವ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 

ಒಂದು ವಿಡಿಯೊದಲ್ಲಿ ‘₹100 ಅಥವಾ ₹200 ಪಡೆದಿದ್ದರಿಂದಾಗಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಂಗನಾ ಅವರು ಹೇಳಿದ್ದರು. ರೈತರ ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಪ್ರತಿಭಟನಕಾರರಲ್ಲಿ ಒಬ್ಬರಾಗಿದ್ದರು’ ಎಂದು ಮಹಿಳಾ ಕಾನ್‌ಸ್ಟೆಬಲ್ ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article