ಜೂನ್ 9 ರಂದು ದುಬೈ ಯಕ್ಷೋತ್ಸವ: 'ದಾಶರಥಿ ದರ್ಶನ' ಯಕ್ಷಗಾನ ಪ್ರದರ್ಶನ

ಜೂನ್ 9 ರಂದು ದುಬೈ ಯಕ್ಷೋತ್ಸವ: 'ದಾಶರಥಿ ದರ್ಶನ' ಯಕ್ಷಗಾನ ಪ್ರದರ್ಶನ

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯುಎಇ ವತಿಯಿಂದ ಜೂ. 9ರಂದು ಮಧ್ಯಾಹ್ನ 2ರಿಂದ ದುಬೈನ ಕರಾಮ ಶೇಖ್ ರಾಶಿದ್  ಸಭಾಗಂಣದಲ್ಲಿ 'ದುಬೈ ಯಕ್ಷೋತ್ಸವ' ಆಯೋಜಿಸಲಾಗಿದೆ.



ವೈಭವದ ದುಬಾಯಿ ಯಕ್ಷೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಯುಎಇಯ ಹೆಮ್ಮೆಯ ಕಲಾ ಪ್ರಸರಣದ ಸಂಸ್ಥೆ- “2024 ರ ಯಕ್ಷಧ್ರುವ ಪಟ್ಲ ಕಲಾ ಪ್ರಶಸ್ತಿ” ವಿಜೇತ ಸಂಸ್ಥೆ *ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರವು ಅಚ್ಚುಕಟ್ಟಾದ ವ್ಯವಸ್ಥೆ, ಕಾರ್ಯಕರ್ತರ- ಕಾರ್ಯಕಾರಿ ಸಮಿತಿಗಳ ಪೂರ್ವತಯಾರಿ ಸಭೆಗಳನ್ನು ಈಗಾಗಲೆ ಮುಗಿಸಿಕೊಂಡಿದೆ. 

ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ-ಯುವ- ಪರಿಣತ-ಪ್ರೌಢ ಕಲಾವಿದರಿಂದ ‘ದಾಶರಥಿ ದರ್ಶನ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನಸಾರಥ್ಯ, ಯುವ ಭಾಗವತರಾದ ಭವ್ಯಶ್ರೀ ಹರೀಶ ಕುಲ್ಕುಂದ ಅವರ ಭಾಗವತಿಕೆಯಲ್ಲಿ ಪ್ರಸಂಗ ಮೂಡಿಬರಲಿದೆ. ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ ಭಾಗವಹಿಸುವರು. ಚಕ್ರತಾಳದಲ್ಲಿ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ ಕಾಣಿಸಿಕೊಳ್ಳುವರು. ಜತೆಗೆ ಸ್ಥಳೀಯ ಕಲಾವಿದರು ಹಿಮ್ಮೇಳದಲ್ಲಿ ಇರಲಿದ್ದಾರೆ.

ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ 2024

ಈ ಬಾರಿಯ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಸ್ಥಳೀಯ ಹಿರಿಯ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯುಎಇ ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ಅವರ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಅವರ ನಿರ್ದೇಶನದಲ್ಲಿ, ಕೇಂದ್ರದ ಎಲ್ಲಾ ಹಿರಿಯ -ಕಿರಿಯ ಕಲಾವಿದರು ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ವಸಿದ್ಧತೆಯಲ್ಲಿದ್ದಾರೆ.

ಪ್ರಸಾದನ ಕಲೆಯಲ್ಲಿ ಸಿದ್ಧಹಸ್ತರಾದ ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ಈಗಾಗಲೇ ದುಬಾಯಿ ತಲುಪಿ ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರದರ್ಶನದ ವಿಶೇಷತೆಗಳು

ಪೂರ್ವರಂಗದಲ್ಲಿ ಗಣಪತಿ ಕೌತುಕ. ಏಕಕಾಲದಲ್ಲಿ ಮೂರು ರಂಗಸ್ಥಳಗಳಲ್ಲಿ ಪ್ರಸಂಗಾರಂಭ. ವೈಭವಪೂರ್ಣ ವಿಶೇಷ ಸೆಟ್ಟಿಂಗ್ ಗಳು. ನೂತನ ನಾಟ್ಯ ಸಂಯೋಜನೆ-ಸೆಟ್ಟಿಂಗ್ ನಲ್ಲಿ ಸೇತು ಬಂಧನ ದೃಶ್ಯ. ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರಗಳ ಸಂಖ್ಯೆ ಒಟ್ಟು 127. ಕುಂಬಳೆ ಪಾರ್ತಿಸುಬ್ಬ, ಜತ್ತಿ ಈಶ್ವರ ಭಟ್, ಕಾಸರಗೋಡು ಸುಬ್ರಾಯ ಪಂಡಿತ, ಎಂ.ಎ.ಹೆಗಡೆ ಶಿರಸಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರು ರಚಿಸಿದ ಪ್ರಸಂಗದ ಹೂರಣದಿಂದ ಕಟ್ಟಿದ ತೋರಣ ದಾಶರಥಿ ದರ್ಶನ.

Ads on article

Advertise in articles 1

advertising articles 2

Advertise under the article