ಚಿಕ್ಕಮಗಳೂರಿನ ಎನ್‌ಆರ್ ಪುರದದಲ್ಲಿ ಕೋತಿಗಳ ಮಾರಣಹೋಮ; 34 ಮಂಗಳನ್ನು ಅಮಾನುಷವಾಗಿ ಕೊಂದು ರಸ್ತೆ ಬದಿಯಲ್ಲಿ ಎಸೆದಿರುವ ಕಿಡಿಗೇಡಿಗಳು
ಚಿಕ್ಕಮಗಳೂರು: ಇಲ್ಲಿನ ಎನ್‌ಆರ್ ಪುರದ ದ್ಯಾವನದಲ್ಲಿ ಮಂಗಗಳ ಮಾರಣಹೋಮ ನಡೆದಿದ್ದು, 34 ಮಂಗಳನ್ನು ಅಮಾನುಷವಾಗಿ ಕೊಂದು ರಸ್ತೆ ಬದಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ನಡೆದಿದೆ.
ಈ ಹೀನ ಕೃತ್ಯಕ್ಕೆ ಪ್ರಾಣಿಪ್ರಿಯರು ಖಂಡನೆ ವ್ಯಕ್ತಪಡಿಸುತ್ತಿದ್ದು, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಬಾಳೆ ಹಣ್ಣಿನಲ್ಲಿ ಪ್ರಜ್ಷೆತಪ್ಪುವ ಔಷಧವಿಟ್ಟಿರುವ ಕಿಡಿಗೇರಿಗಳು, ಮಂಗಗಳ ಪ್ರಜ್ಞೆತಪ್ಪಿಸಿ ಬಳಿಕ ಅವಗಳ ತಲೆಗೆ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ.
ಹೀಗೆ 34 ಮಂಗಗಳನ್ನು ಕೊಂದಿರುವ ದುಷ್ಕರ್ಮಿಗಳು ಮಂಗಗಳ ಕಳೇಬರಗಳನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ. ಮಂಗಗಳು ಸಾವನಪ್ಪಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
4 ಮರಿಗಳು ಸೇರಿ ಒಟ್ಟು 34 ಮಂಗಗಳನ್ನು ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಮಂಗಗಳನ್ನು ಸಾಯಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಕಾಡು ಪ್ರಾಣಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಗೆ ಜಿಲ್ಲಾದ್ಯಂತ ಪ್ರಾಣಿ ಪ್ರಿಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಮಂಗಗಳನ್ನು ಕೊಂದಿರುವ ಆರೋಪಿಗಳ ಪತ್ತೆಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಮಲೆನಾಡಿನ ಜನ ತಮ್ಮ ಬೆಳೆಗಳಾದ ಕಾಫಿ ಮತ್ತು ಬಾಳೆಯನ್ನು ರಕ್ಷಿಸಲು ಮಂಗ ಹಿಡಿಯುವವರನ್ನು ನೇಮಿಸಿಕೊಳ್ಳುತ್ತಿರುತ್ತಾರೆ. ಆದರೆ, ಈ ಘಟನೆ ಉದ್ದೇಶಪೂರ್ವಕವಾಗಿ ನಡೆಸಿರುವ ಕ್ರೌರ್ಯವಾಗಿದೆ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೆಲವು ಕಿಡಿಗೇಡಿಗಳ ಉದ್ದೇಶಪೂರ್ವಕವಾಗಿ ನಡೆಸಿರುವ ಕೃತ್ಯವೆಂದು ತೋರುತ್ತದೆ. ಮಂಗಗಳನ್ನು ಕೊಂದಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದ್ದಾರೆ.