ದುಬೈ ಕನ್ನಡಿಗರ ಕನ್ನಡ ಕೂಟದಿಂದ ಯಶಸ್ವಿಯಾಗಿ ನಡೆದ 'ಸಂಗೀತ ಸೌರಭ -2024'
ದುಬೈ: ಇತ್ತೀಚಿಗೆ ಕನ್ನಡಿಗರ ಕನ್ನಡ ಕೂಟ(ಕನ್ನಡಿಗರು ದುಬೈ )ವು J.S.S. Private ಸ್ಕೂಲ್ ಆಡಿಟೋರಿಯಂನಲ್ಲಿ ಸಂಗೀತ ಸೌರಭ -2024 ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿತ್ತು. ಈ ಕಾರ್ಯಕ್ರಮವು 600ಕ್ಕೂ ಹೆಚ್ಚು ಪ್ರೇಕ್ಷಕರನ್ನು ಮನೋರಂಜಿಸಿತು.
ಕನ್ನಡಿಗರು ದುಬೈ ನ ಅಧ್ಯಕ್ಷರು, ಉಪಾಧ್ಯಕ್ಷರು, ಗೌರವಾನ್ವಿತ ಗಣ್ಯರು, ಪದಾಧಿಕಾರಿಗರು ದೀಪ ಬೆಳೆಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕನ್ನಡಿಗರು ದುಬೈ ನ ನೂತನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ನೆರವೇರಿದರು. ಅರುಣ್ ಕುಮಾರ್ ಅವರು ಮಾತನಾಡುತ್ತ, ಕನ್ನಡಿಗರು ದುಬೈ ನ ಕಳೆದ 20 ವರ್ಷದ ಸಾಧನೆಗಳ ಪಟ್ಟಿಗಳನ್ನು ವಿವರಿಸಿತ್ತಾ, ದುಬೈಯಲ್ಲಿ ಸತತ ಎರಡು ದಶಕಗಳಿಂದ ಸಂಗೀತ ಸೌರಭ ಮತ್ತು ಕರ್ನಾಟಕ ರಾಜ್ಯೋತ್ಸವ ನಡೆಸಿಕೊಂಡು ಬಂದಿರುವ ಏಕೈಕ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಸಂಗೀತ ಸೌರಭದ ಮೂಲಕ ಹೊಸ ಹೊಸ ಮೈಲುಗಲ್ಲು ಸೃಷ್ಟಿಸಿರುವ ಏಕೈಕ ಸಂಘ ಎಂದು ತಿಳಿಸಿದರು. ಇಂತಹ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿರುವ ಕನ್ನಡಿಗರು ದುಬೈ ನ ಮಾಜಿ ಅಧ್ಯಕ್ಷರುಗಳಾದ ಸಾದನ್ ದಾಸ್, ವೀರೇಂದ್ರ ಬಾಬು, ಉಮಾ ವಿದ್ಯಾಧರ್, ಸಲಹಾ ಸಮಿತಿ ಸದಸ್ಯರುಗಳಾದ ರೊನಾಲ್ಡ್ ಮಾರ್ಟಿಸ್ ಮತ್ತು ಮಂಜುನಾಥ್ ರಾಜ್ ಹಾಗೂ ಎಲ್ಲ ಸಮಿತಿಯ ಸದಸ್ಯರುಗಳಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕೃಷ್ಣ ರಕ್ಷಿತ್ ಅವರು ನೆರವೇರಿಸಿದರು. ಸಂಗೀತ ಸೌರಭ -2024 ಕಾರ್ಯಕ್ರಮವು ಡಾ.ಅಭೀಷೆಕ್ ರಾವ್ ಅವರ ರಸಮಂಜರಿ ಪ್ರೇಕ್ಷಕರನ್ನು ಮನೋರಂಜಿಸಿತು ಅವರ ಜೊತೆ ಅಕ್ಷತಾ ರಾವ್, ಹಶ್ಮಿತಾ ದಿನೇಶ್, ಅಶೊಕ ಕಾಶಿ ಸುಮಧುರ ಗಾನಗಳನ್ನು ಹೇಳಿ ಮನೋರಂಜಿಸಿದರು. ಇದರ ಜೊತೆಗೆ ಹಲವಾರು ನಾಟ್ಯಗಳು, ಭಾವಗೀತ, ಜಾನಪದ ಗೀತೆಗಳು ಹಾಗೂ ನೃತ್ಯಗಳು ಸಂಗೀತ ಲೋಕವನ್ನೇ ಸೃಷ್ಟಿಸಿತ್ತು. ಕೊನೆಯಲ್ಲಿ ನಡೆದ ಕರ್ನಾಟಿಕ್ ವಾದ್ಯ ಸಂಗೀತವು ಕಾರ್ತಿಕ್ ಮೆನನ್ ( ವಯೊಲಿನ್), ಅಮೃತ್ ಕುಮಾರ್ ( ಮೌರ್ಸಿಂಗ್ / ಕುಣ್ಣೂಕೋಲ್) ಮತ್ತು ನಂದಗೋಪಾಲ್ ( ಮೃದಂಗ) ಸಂಗೀತ ಲೋಕವನ್ನೇ ಸೃಷ್ಟಿಸಿತು.
ವೇದಿಕೆಯಲ್ಲಿ, ಇತ್ತೀಚೆಗಷ್ಟೇ ದಿವಂಗತರಾದ ಕನ್ನಡದ ಕುಳ್ಳ ದ್ವಾರಕೀಶ್ ಅವರ ಸವಿನೆನಪಿನ ಚಿತ್ರಣದ ಮೂಲಕ ಸಂತಾಪ ಸೂಚಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ದ್ವಾರಕೀಶ್ ಅವರ ಸುಪುತ್ರ ಸುಕೇಶ್ ದ್ವಾರಕೀಶ್ ಅವರು ತಮ್ಮ ಪತ್ನಿ ಲೀಲಾ ಸುಕೇಶ್ ಮತ್ತು ಮಗಳು ಧೀಕ್ಷಾ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ Fortune ಗ್ರೂಪ್ ನ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಹಾಗೂ ಮಾಜಿ ಅಧ್ಯಕ್ಷರುಗಳು, UAE ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುಧಾಕರ್ ಪೇಜಾವರ, ಬಸವ ಸಮಿತಿ ಅಧ್ಯಕ್ಷ ಬಸವರಾಜ್ ಹೊಂಗಲ್, ಜಯಂತ್ ಶೆಟ್ಟಿ ಯಕ್ಷ ಮಿತ್ರರು, ಒಕ್ಕಲಿಗ ಸಂಘದ ಅಧ್ಯಕ್ಷ ಕಿರಣ್ ಗೌಡ, ಬಾಲ ಸಾಲಿಯಾನ್, ಗಣೇಶ್ ರೈ, ವಾಸುದೇವ ಶೆಟ್ಟಿ (ಬ್ರಿಟಾನಿಯಾ) ಮತ್ತು ಹಲವಾರು ಸಂಘ ಸಂಸ್ಥೆಗಳಾದ UAE ಹೆಮ್ಮೆಯ ಕನ್ನಡ ಸಂಘ, ಗಲ್ಫ್ ಗೆಳೆಯರು, ಗಲ್ಫ್ ಗೆಳೆತಿಯರು ಮತ್ತು ಇತರೆ ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮತ್ತು ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡಿಗರು ದುಬೈಯು ಅತ್ಯಂತ ಯಶಸ್ವೀ ಕಾರ್ಯಕ್ರಮ ಗಲ್ಫ್ ಗಾನ ಕೋಗಿಲೆ - ಸೀಸನ್ 2 ನಡೆಸುವ ಬಗ್ಗೆ ಚಿಂತನೆ ನಡೆಸಿರುವುದರ ಬಗ್ಗೆ ಮಾಹಿತಿ ನೀಡಿತು ಮತ್ತು ಪ್ರತೀ ವರ್ಷ ನವೆಂಬರ್ ನ ಎರಡನೇ ವಾರ ನಡೆಸಿಕೊಂಡು ಬಂದಿರುವ ಕರ್ನಾಟಕ ರಾಜ್ಯೋತ್ಸವ - 2024ನ್ನು 9 ನವೆಂಬರ್ 2024 ರಂದು ಎಲ್ಲ ಗಲ್ಫ್ ರಾಷ್ಟ್ರಗಳ ಕನ್ನಡ ಸಂಘಗಳ ಸಹಯೋಜನೆಯೊಂದಿಗೆ ನಡೆಸುವುದಾಗಿ ಅಧಿಕೃತ ಪತ್ರಿಕಾ ವರದಿಯನ್ನು ಬಿಡುಗಡೆ ಮಾಡಲಾಯಿತು.
ಕನ್ನಡಿಗರು ದುಬೈ ನ ಉಪಾಧ್ಯಕ್ಷ ವಿನೀತ್ ರಾಜ್ ಅವರು ಎಲ್ಲ ಪ್ರಾಯೋಜಕರುಗಳಿಗೆ, ಗಣ್ಯರುಗಳಿಗೆ, ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ನೆರೆದಿದ್ದ ಎಲ್ಲ ಸಭಿಕರುಗಳಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು.