ಬೋಳಿಯಾರ್ ಬಳಿ ಚೂರಿ ಇರಿತ ಪ್ರಕರಣ; ಮೂವರನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಸಮೀಪದ ಬೋಳಿಯಾರ್ ಬಳಿ ರವಿವಾರ ರಾತ್ರಿ ಬಿಜೆಪಿಯ ವಿಜಯೋತ್ಸವ ಮೆರವಣಿಗೆ ಬಳಿಕ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಯುವಕರ ತಂಡವೊಂದು ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೋದಿ ಸತತ ಮೂರನೇ ಸಲ ದೇಶದ ಪ್ರಧಾನಿಯಾಗಿ ಪದಗ್ರಹಣದ ನಡೆಸಿದ್ದಕ್ಕೆ ಬಿಜೆಪಿ ಬೋಳಿಯಾರ್ ನಲ್ಲಿ ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಿತ್ತು. ಈ ವೇಳೆ ಅಲ್ಲಿನ ಮಸೀದಿ ಬಳಿ ಕಾರ್ಯಕರ್ತರು ಕೆಲಹೊತ್ತು ಘೋಷಣೆ ಕೂಗಿದ್ದರು. ಬಳಿಕ ಅನ್ಯ ಸಮುದಾಯಕ್ಕೆ ಸೇರಿದ ಯುವಕರ ತಂಡವು ಬೋಳಿಯಾರ್ ಸಮಾಧಾನ್ ಬಾರ್ ಬಳಿ ಮೂವರು ಕಾರ್ಯಕರ್ತರನ್ನು ಅಡ್ಡಗಟ್ಟಿತ್ತು. ಇಬ್ಬರಿಗೆ ಚೂರಿಯಿಂದ ಇರಿದು, ಒಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು ಎನ್ನಲಾಗಿದೆ. ಇರಿತಕ್ಕೊಳಗಾದ ಹರೀಶ್ ಹಾಗೂ ನಂದ ಕುಮಾರ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.